ಶನಿವಾರ, 24 ಅಕ್ಟೋಬರ್ 2026

ಆಟವಾಡುತ್ತಾ ಕೀ ಆನ್‌ ಮಾಡಿದ ಮಗು-ಟ್ರ್ಯಾಕ್ಟರ್‌ ಹರಿದು ತಂದೆ ಸಾವು

ಹಾಸನ: ಮೂರು ವರ್ಷದ ಮಗುವೊಂದು ಆಟವಾಡುತ್ತಾ ಟ್ರ್ಯಾಕ್ಟರ್‌ ಕೀ ಆನ್‌ ಮಾಡಿದ್ದು, ಪರಿಣಾಮ ತಂದೆಯ ಮೇಲೆ ಚಕ್ರ ಹರಿದು ಸಾವಿಗೀಡಾದ ಘಟನೆ ಹೊಳೆನರಸೀಪುರ ಪಟ್ಟಣದ ಕೋಟೆ ಒಕ್ಕಲಿಗರ ಬೀದಿಯಲ್ಲಿ ನಡೆದಿದೆ.

ಯಶ್ವಂತ್‌ (37) ಟ್ರ್ಯಾಕ್ಟರ್‌ ಹರಿದು ಸಾವಿಗೀಡಾದ ವ್ಯಕ್ತಿ. ಸಾರಿಗೆ ಸಂಸ್ಥೆಯ ನೌಕರರಾಗಿದ್ದ ಇವರು ಅರಕಲಗೂಡು ಘಟಕದಲ್ಲಿ ಕೆಲಸ ಮಾಡುತ್ತಿದ್ದರು.

ಇವರು ಹೊಸ ಮನೆ ಕಟ್ಟಿಸುತ್ತಿದುದ, ವರಮಹಾಲಕ್ಷ್ಮೀ ಹಬ್ಬದಂದು ಆರ್‌ಸಿಸಿಗಾಗಿ ಟ್ರ್ಯಾಕ್ಟರ್‌ ಸೆಂಟ್ರಿಂಗ್‌ ಸಾಮಾಗ್ರಿಗಳನ್ನು ತರಿಸಿದ್ದರು. ಈ ವೇಳೆ ಮಗುವನ್ನು ಆಟವಾಡಿಸುತ್ತಾ ಟ್ರ್ಯಾಕ್ಟರ್‌ ಮೇಲೆ ಕೂರಿಸಿದ್ದು, ಮಗು ಟ್ರ್ಯಾಕ್ಟರ್‌ ಕೀ ಆನ್‌ ಮಾಡಿದ್ದು ಟ್ರ್ಯಾಕ್ಟರ್‌ ಏಕಾಏಕಿ ಮುಂದಕ್ಕೆ ಹೋಗಿದೆ.

ಮಗು ಬೀಳುತ್ತೆ ಎನ್ನುವ ಗಾಬರಿಯಲ್ಲಿ ರಕ್ಷಣೆಗೆ ಬಂದ ಯಶ್ವಂತ್‌ ಮೇಲೆ ಟ್ರ್ಯಾಕ್ಟರ್‌ ಚಕ್ರ ಹರಿದು, ಅವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ.

ಘಟನಾ ಸ್ಥಳಕ್ಕೆ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.