ಭಾನುವಾರ, 25 ಅಕ್ಟೋಬರ್ 2026
Trending

ಪ್ರಧಾನಿ ಮೋದಿ ಅಂಗಳಕ್ಕೆ ಕೇತನ್ ಅಗರ್ವಾಲ್ ಪ್ರಕರಣ

ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣ ಇದೀಗ ಪ್ರಧಾನಿ ಮೋದಿ ಅವರ ಅಂಗಳ ತಲುಪಿದ್ದು ತನ್ನ ಮಗನಿಗೆ ನ್ಯಾಯ ಕೊಡಿಸುವಂತೆ ಕೇತನ್ ತಾಯಿ ಮೋದಿಗೆ ಪತ್ರ ಬರೆದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕೇತನ್ ಅವರ ತಂದೆ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು.

Sponsored

ಪ್ರಧಾನಿಗೆ ಬರೆದ ಪತ್ರದಲ್ಲೇನಿದೆ?

“ನನ್ನ ಸ್ವಂತ ಮಗನಿಗೆ ನ್ಯಾಯ ಕೊಡಿಸಿ ಎಂದು ನಿಮಗೆ ಪತ್ರ ಬರೆಯಬೇಕಾದ ಪರಿಸ್ಥಿತಿ ಬರುತ್ತದೆ ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಪ್ರತಿಯೊಬ್ಬ ತಾಯಿಯಂತೆ, ನಾನು ಕೂಡ ಕೇತನ್ ತನ್ನ ಬದುಕನ್ನು ಚೆನ್ನಾಗಿ ರೂಪಿಸಿಕೊಳ್ಳುವುದನ್ನು, ಮದುವೆಯಾಗುವುದನ್ನು ಮತ್ತು ನಮ್ಮೊಂದಿಗೆ ಬೆಳೆಯುವುದನ್ನು ನೋಡಬೇಕು ಎಂದು ಕನಸು ಕಂಡಿದ್ದೆ. ಆದರೆ, ನನ್ನ ಮಗನ ಚಿತೆಗೆ ನಾನೇ ಅಗ್ನಿ ಸ್ಪರ್ಶ ಮಾಡಬೇಕಾಯಿತು. ಒಬ್ಬ ತಾಯಿಗೆ ಇದಕ್ಕಿಂತ ದೊಡ್ಡ ನೋವು ಬೇರೊಂದಿಲ್ಲ”

“ನನ್ನ ಮಗನನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿದೆ. ಅವನೊಂದಿಗೆ ನನ್ನ ಇಡೀ ಪ್ರಪಂಚವೇ ಕೊನೆಯಾಗಿದೆ. ನಮ್ಮ ಮನೆಯ ಮೂಲೆ ಮೂಲೆಗಳೂ ನನಗೆ ಅವನನ್ನೇ ನೆನಪಿಸುತ್ತವೆ. ಅವನ ಕೋಣೆ, ಅವನ ಬಟ್ಟೆಗಳು, ಅವನ ಫೋಟೋಗಳು ಮತ್ತು ಅವನ ನಗುವಿನ ಜಾಗದಲ್ಲಿ ಆವರಿಸಿರುವ ಮೌನ, ಅವನು ಇನ್ನು ಮುಂದೆ ಎಂದಿಗೂ ಮರಳಿ ಬರುವುದಿಲ್ಲ ಎಂಬುದನ್ನು ನನಗೆ ಪ್ರತಿದಿನ ನೆನಪಿಸುತ್ತವೆ”

“ಕೇತನ್ ತೀರಿಕೊಂಡ ಕೇವಲ ಇಪ್ಪತ್ತು ದಿನಗಳಲ್ಲೇ ನನ್ನ ಮಾವನವರೂ ಸಹ ತೀರಿಕೊಂಡರು. ಇದು ನಮ್ಮ ಕುಟುಂಬಕ್ಕೆ ಮತ್ತೊಂದು ದೊಡ್ಡ ಆಘಾತ ನೀಡಿದೆ. ಅವರು ಕೇತನ್‌ನನ್ನು ತುಂಬಾ ಪ್ರೀತಿಸುತ್ತಿದ್ದರು. ತನ್ನ ಮೊಮ್ಮಗನನ್ನು ಕಳೆದುಕೊಂಡ ದುಃಖವನ್ನು ಅವರ ಕೈಯಲ್ಲಿ ತಡೆದುಕೊಳ್ಳಲು ಆಗಲಿಲ್ಲ. ಹೀಗೆ ಕೆಲವೇ ದಿನಗಳಲ್ಲಿ ನಮ್ಮ ಕುಟುಂಬವು ಎರಡು ತಲೆಮಾರಿನವರನ್ನು ಕಳೆದುಕೊಂಡಿದೆ”

“ಮೋದಿ ಜಿ, ನಾನು ಕೇವಲ ಒಬ್ಬ ತಾಯಿ. ನಾನು ಯಾವುದೇ ಸಹಾನುಭೂತಿ ಅಥವಾ ವಿಶೇಷ ಸೌಲಭ್ಯವನ್ನು ಕೇಳುತ್ತಿಲ್ಲ. ನಾನು ಕೇಳುತ್ತಿರುವುದು ಕೇವಲ ನ್ಯಾಯ ಮಾತ್ರ. ನ್ಯಾಯ ಸಿಗದೇ ಕಳೆಯುವ ಪ್ರತಿಯೊಂದು ದಿನವೂ ನಮ್ಮ ನೋವನ್ನು ಇನ್ನುಷ್ಟು ಹೆಚ್ಚಿಸುತ್ತಿದೆ. ಕೇತನ್ ಮತ್ತೆ ಮರಳಿ ಬರಲು ಸಾಧ್ಯವಿಲ್ಲ ನಿಜ, ಆದರೆ ಅವನ ಪ್ರಾಣ ತೆಗೆದವರಿಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಯಾಗಲೇಬೇಕು. ನನ್ನ ಮಗನಿಗೆ ನ್ಯಾಯ ಸಿಗಬೇಕು, ಅಷ್ಟೇ ನನ್ನ ಆಸೆ. ನನ್ನ ಮಗನ ಪ್ರಕರಣಕ್ಕೆ ಸೂಕ್ತ ಗಮನ ಹರಿಸಿ, ಯಾವುದೇ ವಿಳಂಬವಿಲ್ಲದೆ ಆದಷ್ಟು ಬೇಗ ನ್ಯಾಯ ಸಿಗುವಂತೆ ಮಾಡಬೇಕೆಂದು ನಾನು ಕೈಮುಗಿದು ವಿನಮ್ರವಾಗಿ ವಿನಂತಿಸಿಕೊಳ್ಳುತ್ತೇನೆ”.

“ದಯವಿಟ್ಟು ಕೇತನ್‌ನನ್ನು ಕೇವಲ ಒಂದು ಕಡತದ ಫೈಲ್ ಆಗಿ ಉಳಿಯಲು ಬಿಡಬೇಡಿ. ನನಗೆ ಅವನೇ ಇಡೀ ಜಗತ್ತಾಗಿದ್ದ. ಪ್ರತೀ ದಿನ ರಾತ್ರಿ ನಾನು ಅವನ ಫೋಟೋವನ್ನು ನೋಡಿ, “ಮಗನೇ, ನಿನ್ನ ತಾಯಿ ನಿನಗಾಗಿ ಇನ್ನು ಹೋರಾಡುತ್ತಿದ್ದಾಳೆ” ಎಂದು ಹೇಳುತ್ತೇನೆ. ಒಂದು ದಿನ ಅವನಿಗೆ “ಮಗನೇ… ನಿನಗೆ ನ್ಯಾಯ ಸಿಕ್ಕಿತು” ಎಂದು ಹೇಳುವಂತಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ದುಃಖದಲ್ಲಿರುವ ಒಬ್ಬ ತಾಯಿಯ ಧ್ವನಿಯನ್ನು ನೀವು ಕೇಳುತ್ತೀರಿ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ” ಎಂದು ಸುಧೀರ್ಘವಾದ ಪತ್ರದಲ್ಲಿ ನೋವನ್ನು ತೋಡಿಕೊಂಡಿದ್ದಾರೆ.