ನವದೆಹಲಿ: ಟೀಮ್ ಇಂಡಿಯಾದ ಹಿರಿಯ ಲೆಗ್ ಸ್ಪಿನ್ನರ್ ಕರಣ್ ಶರ್ಮಾ ಸ್ಪರ್ಧಾತ್ಮಕ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. 38 ವರ್ಷದ ಕರಣ್ ಶರ್ಮಾ, ಪ್ರಸ್ತುತ ನಡೆಯುತ್ತಿರುವ ಯುಪಿ ಟಿ20 ಲೀಗ್ನಲ್ಲಿ ಆಗಸ್ಟ್ 25ರಂದು ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವಾಡಲಿದ್ದಾರೆ. ಈ ಪಂದ್ಯದ ಬಳಿಕ ಅವರು ಅಧಿಕೃತವಾಗಿ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ.
ನಿವೃತ್ತಿ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ಕರಣ್ ಶರ್ಮಾ, ತಮ್ಮ ದೀರ್ಘಕಾಲದ ಕ್ರಿಕೆಟ್ ಪಯಣಕ್ಕೆ ಬೆಂಬಲ ನೀಡಿದ ಬಿಸಿಸಿಐ ಸೇರಿದಂತೆ ರೈಲ್ವೇಸ್, ಉತ್ತರ ಪ್ರದೇಶ, ಆಂಧ್ರ ಹಾಗೂ ವಿದರ್ಭ ಕ್ರಿಕೆಟ್ ಸಂಸ್ಥೆಗಳು ಮತ್ತು ಕುಟುಂಬ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೋಚಿಂಗ್ ಸೇರಿದಂತೆ ಕ್ರಿಕೆಟ್ಗೆ ಸಂಬಂಧಿಸಿದ ವಿವಿಧ ಜವಾಬ್ದಾರಿಗಳಲ್ಲಿ ಮುಂದುವರಿಯುವ ಇಂಗಿತವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾದಲ್ಲಿ ಸೀಮಿತ ಅವಕಾಶ
ಕರಣ್ ಶರ್ಮಾ ಭಾರತ ತಂಡದ ಪರ ಸೀಮಿತ ಅವಕಾಶಗಳನ್ನು ಪಡೆದಿದ್ದರು. 2014ರಲ್ಲಿ ಅವರು ಕೊನೆಯ ಬಾರಿ ರಾಷ್ಟ್ರೀಯ ತಂಡದ ಜೆರ್ಸಿ ಧರಿಸಿದ್ದರು. ಭಾರತ ಪರ ಒಂದು ಟೆಸ್ಟ್, ಎರಡು ಏಕದಿನ ಹಾಗೂ ಒಂದು ಟಿ20 ಪಂದ್ಯವಾಡಿರುವ ಅವರು ಒಟ್ಟು ಐದು ವಿಕೆಟ್ ಪಡೆದಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ನಾಲ್ಕು ವಿಕೆಟ್ ಹಾಗೂ ಟಿ20ಯಲ್ಲಿ ಒಂದು ವಿಕೆಟ್ ಪಡೆದಿರುವ ಕರಣ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಅವಕಾಶ ಪಡೆಯದಿದ್ದರೂ ದೇಶೀಯ ಕ್ರಿಕೆಟ್ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ದೇಶೀಯ ಕ್ರಿಕೆಟ್ನಲ್ಲಿ 551 ವಿಕೆಟ್
ದೇಶೀಯ ಕ್ರಿಕೆಟ್ನಲ್ಲಿ ಕರಣ್ ಶರ್ಮಾ ಅವರ ಸಾಧನೆ ಗಮನಾರ್ಹವಾಗಿದೆ. ವಿವಿಧ ಮಾದರಿಗಳಲ್ಲಿ ಒಟ್ಟು 551 ವಿಕೆಟ್ಗಳನ್ನು ಕಬಳಿಸಿರುವ ಅವರು, 97 ಪ್ರಥಮ ದರ್ಜೆ ಪಂದ್ಯಗಳಲ್ಲಿ 270 ವಿಕೆಟ್, 123 ಲಿಸ್ಟ್-ಎ ಪಂದ್ಯಗಳಲ್ಲಿ 153 ವಿಕೆಟ್ ಹಾಗೂ 191 ಟಿ20 ಪಂದ್ಯಗಳಲ್ಲಿ 168 ವಿಕೆಟ್ ಪಡೆದಿದ್ದಾರೆ.
ಐಪಿಎಲ್ನಲ್ಲಿ ಅಪರೂಪದ ಸಾಧನೆ
ಐಪಿಎಲ್ನಲ್ಲಿಯೂ ಕರಣ್ ಶರ್ಮಾ ಹಲವು ತಂಡಗಳನ್ನು ಪ್ರತಿನಿಧಿಸಿದ್ದಾರೆ. ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳ ಪರ ಆಡಿರುವ ಅವರು, ಸತತ ಮೂರು ವರ್ಷಗಳಲ್ಲಿ ಮೂರು ವಿಭಿನ್ನ ತಂಡಗಳೊಂದಿಗೆ ಐಪಿಎಲ್ ಚಾಂಪಿಯನ್ ಆದ ಅಪರೂಪದ ದಾಖಲೆಯನ್ನು ಹೊಂದಿದ್ದಾರೆ.
2016ರಲ್ಲಿ ಸನ್ರೈಸರ್ಸ್ ಹೈದರಾಬಾದ್, 2017ರಲ್ಲಿ ಮುಂಬೈ ಇಂಡಿಯನ್ಸ್ ಹಾಗೂ 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಭಾಗವಾಗಿದ್ದ ಕರಣ್, ಮೂರು ಸತತ ಆವೃತ್ತಿಗಳಲ್ಲಿ ಮೂರು ವಿಭಿನ್ನ ಚಾಂಪಿಯನ್ ತಂಡಗಳ ಸದಸ್ಯರಾಗಿದ್ದರು.
2025ರ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಪರ ತಮ್ಮ ಕೊನೆಯ ಐಪಿಎಲ್ ಪಂದ್ಯವಾಡಿದ್ದ ಕರಣ್ ಶರ್ಮಾ, ಇದೀಗ ಸ್ಪರ್ಧಾತ್ಮಕ ಕ್ರಿಕೆಟ್ಗೆ ವಿದಾಯ ಹೇಳಿ ಹೊಸ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.



