ಶನಿವಾರ, 24 ಅಕ್ಟೋಬರ್ 2026

Mangaluru : ಮಂಗಳೂರಿನಲ್ಲೇ ದೈವಕ್ಕೆ ಅಪಚಾರ – ಪ್ರಸಿದ್ಧ ದೇವಾಲಯದಲ್ಲಿ ಕ್ರೈಸ್ತ ಧರ್ಮದ ಯುವಕನಿಂದ ದೈವ ನರ್ತನ?

Mangaluru : ಕರಾವಳಿಯ ಪ್ರಮುಖ ಆಚರಣೆ, ಸಂಪ್ರದಾಯ ಎನಿಸಿರುವ ಭೂತಾರಾಧನೆ ಅಥವಾ ದೈವರಾಧನೆಗೆ ಇತ್ತೀಚಿನ ದಿನಗಳಲ್ಲಿ ರಾಜ್ಯದ ಬೇರೆ ಬೇರೆ ಸ್ಥಳಗಳಲ್ಲಿ ಅಪಮಾನ ಎಸಗುತ್ತಿದ್ದ ಪ್ರಕರಣಗಳನ್ನು ನೋಡಿದ್ದೇವೆ. ಆದರೆ ಇದೀಗ ತುಳುನಾಡಿನ ಮಂಗಳೂರಿನಲ್ಲಿ ದೈವಕ್ಕೆ ಅಪಚಾರ ಮಾಡಲಾಗಿದೆ ಎಂಬ ಸುದ್ದಿ ಮುನ್ನಲೆಗೆ ಬಂದಿದೆ.

ಹೌದು, ಮಂಗಳೂರಿನ ಪ್ರಸಿದ್ಧ ದೈವಸ್ಥಾನದಲ್ಲಿ ನಡೆದ ನೇಮೋತ್ಸವದ ವೇಳೆ ಬಂಟ ದೈವಕ್ಕೆ ಕ್ರೈಸ್ತ ಧರ್ಮದ ಯುವಕನಿಂದ ದೈವ ನರ್ತನ ಸೇವೆ ಮಾಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಜನವರಿ 31ರಂದು ಮಂಗಳೂರಿನ ಪ್ರಸಿದ್ಧ ದೈವಕ್ಷೇತ್ರದಲ್ಲಿ ಶ್ರೀ ಜಾರಂದಾಯ ಹಾಗೂ ಬಂಟ ದೈವಕ್ಕೆ ನೇಮೋತ್ಸವ ನಡೆದಿತ್ತು. ಈ ವೇಳೆ ಬಂಟ ದೈವಕ್ಕೆ ಕ್ರೈಸ್ತ ಧರ್ಮದ ಯುವಕನಿಂದ ನರ್ತನ ಮಾಡಿಸಲಾಗಿದೆ ಎಂದು ಪಂಬದ ಸಮುದಾಯದ ಸಂಶೋಧಕಿ‌ ಡಾ.ರತಿ ಆರೋಪಿಸಿದ್ದಾರೆ. 

ಸಂಪ್ರದಾಯದಂತೆ ದೈವ ನರ್ತನ ಸೇವೆಯನ್ನು ನಲಿಕೆ, ಪರವ ಹಾಗೂ ಪಂಬದ ಸಮುದಾಯದವರು ಮಾತ್ರ ಮಾಡಬೇಕು ಎಂಬ ಕಟ್ಟುನಿಟ್ಟಿನ ನಿಯಮವಿದೆ.  ಜಾರಂದಾಯ ದೈವದ ನರ್ತನವನ್ನು ಪ್ರಸಿದ್ಧ ದೈವ ನರ್ತಕ ಚಿಪ್ಪಾರು ಗಣೇಶ್ ಪಂಬದ ನೆರವೇರಿಸಿದ್ದಾರೆ. ಇದೇ ವೇಳೆ ಬಂಟ ದೈವದ ನರ್ತನ ಸೇವೆಯನ್ನು ಕ್ರೈಸ್ತ ಧರ್ಮದ ಯುವಕನಿಗೆ ನೀಡಲಾಗಿದೆ. ನರ್ತನ ಮಾಡಿದ ಯುವಕನ ತಂದೆ ಪಂಬದ ಸಮುದಾಯದವರಾಗಿದ್ದು, ತಾಯಿ ಕ್ರೈಸ್ತ ಧರ್ಮದವರು ಎಂಬ ವಿಚಾರ ಇದೀಗ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಘಟನೆ ಹೊರಬಿದ್ದ ನಂತರ ತುಳುನಾಡಿನಲ್ಲಿ ಭಾರೀ ಚರ್ಚೆ ಆರಂಭವಾಗಿದ್ದು, ದೈವಾರಾಧನೆ ಸಂಪ್ರದಾಯದ ಬಗ್ಗೆ ಹೊಸ ವಿವಾದ ಎದ್ದಿದೆ.

ಸಂಶೋಧಕಿ‌ ಡಾ.ರತಿ ಆರೋಪ :

 ಈ ಒಂದು ನಡೆಯಿಂದ ತುಂಬಾ ನೋವಾಗಿದೆ. ತೀರ್ಮಾನ ಜನರಿಗೆ ಬಿಟ್ಟಿದ್ದು. ದೈವ ನರ್ತಕನ ಆವೇಷ ನೋಡಿದ್ರೆ ನೇಮ‌ ಎಂದು ಅನ್ನಿಸಲ್ಲ. ಕ್ರೈಸ್ತ ಹುಡುಗ ಕುಣಿಯೋದು ನೋಡಿ ನಮಗೆ ಇದು ನಾಟಕವೇನೋ ಎನ್ನಿಸಿತು. ನಮ್ಮದು ಅಳಿಯಕಟ್ಟು ಆದ್ದರಿಂದ ನಮ್ಮಲ್ಲಿ ಬೇರೆ ಜಾತಿ, ಧರ್ಮದವರು ಬಂದು ನೇಮ‌ ಕಟ್ಟುವಂತಿಲ್ಲ. ನಾವು ಇದನ್ನು ಪ್ರಶ್ನೆ ಮಾಡಿದಾಗ ನಾವು ಯಾರನ್ನು ಬೇಕಾದರೂ ಕರ್ಕೊಂಡು ಬಂದು ದೈವ ಕಟ್ಟಿಸುತ್ತೇವೆ ಎಂದು ಉತ್ತರ ಕೊಟ್ಟಿದ್ದಾರೆ. ಹೆಂಗಸಾದ ನಿನಗೆ ಬಣ್ಣ ಹಚ್ಚಿ ದೈವ ನರ್ತನ‌ ಮಾಡಲು‌ ಆಗುತ್ತಾ ಎಂದು ನನ್ನನ್ನೇ ಪ್ರಶ್ನಿಸಿದ್ದಾರೆ ಎಂಬುದಾಗಿ ಅವರು ಹೇಳಿದ್ದಾರೆ.