ಶನಿವಾರ, 24 ಅಕ್ಟೋಬರ್ 2026

ಇಂದೇ ಎಲೆಕ್ಷನ್ ನಡೆದರೆ NDA ಗೆ 326 ಸ್ಥಾನ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಬಳಿಕ ಮೋದಿಯ ವರ್ಚಸ್ಸು ಕುಗ್ಗಿದೆ, ಎನ್ ಡಿಎ ಮೈತ್ರಿಕೂಟದಲ್ಲಿ ಬಿರುಕು ಮೂಡಿದೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದೆಲ್ಲಾ ವಿಶ್ಲೇಷಿಸಲಾಗಿತ್ತು. ಆದರೆ ಈಗ ಅಚ್ಚರಿಯ ಸಮೀಕ್ಷೆ ಒಂದು ಹೊರ ಬಿದ್ದಿದ್ದು ಇಂದೇ ಚುನಾವಣೆ ನಡೆದರೂ NDA ಮೈತ್ರಿಕೂಟ ಭರ್ಜರಿ ಗೆಲುವನ್ನು ಸಾಧಿಸಲಿದೆ ಎಂದು ತಿಳಿಸಿದೆ.

ಹೌದು, ಇಂದೇ ಲೋಕಸಭಾ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ 326 ಸ್ಥಾನಗಳನ್ನುಗೆದ್ದು ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಇಂಡಿಯಾ ಟುಡೇ–ಸಿವೋಟರ್‌ನ ಇತ್ತೀಚಿನ ಮೂಡ್ ಆಫ್ ದಿ ನೇಷನ್ ಸಮೀಕ್ಷೆ ತಿಳಿಸಿದೆ. ಅಲ್ಲದೆ ಹೀಗಿದ್ದರೂ ಅದರ ಜನಪ್ರಿಯತೆಯಲ್ಲಿ ಕುಸಿತದ ಲಕ್ಷಣಗಳು ಕಂಡುಬರುತ್ತಿವೆ ಎಂದು ಸಮೀಕ್ಷೆಗಳು ಹೇಳಿವೆ.

ಜನವರಿ ಸಮೀಕ್ಷೆಗೆ ಹೋಲಿಸಿದರೆ INDIA ಒಕ್ಕೂಟದ ಸ್ಥಾನಗಳಲ್ಲಿ ಗಣನೀಯ ಏರಿಕೆಯೇನೂ ಕಂಡುಬಂದಿಲ್ಲ. ಇತ್ತೀಚಿನ ಸಮೀಕ್ಷೆಯು ಕಾಂಗ್ರೆಸ್(Congress) ನೇತೃತ್ವದ ಮೈತ್ರಿಕೂಟಕ್ಕೆ 185 ಸ್ಥಾನಗಳನ್ನು ಅಂದಾಜಿಸಿದ್ದರೆ, ಜನವರಿ 2026ರ ಸಮೀಕ್ಷೆಯಲ್ಲಿ 182 ಸ್ಥಾನಗಳನ್ನು ಊಹಿಸಲಾಗಿತ್ತು. ಆದರೆ, 2014ರ ನಂತರ ಎನ್‌ಡಿಎಗೆ ತೀವ್ರ ಪೈಪೋಟಿ ನೀಡಿ 2024ರಲ್ಲಿ ಈ ಮೈತ್ರಿಕೂಟ ಗೆದ್ದಿದ್ದ 234 ಸ್ಥಾನಗಳಿಗೆ ಹೋಲಿಸಿದರೆ ಇದು ದೊಡ್ಡ ಮಟ್ಟದ ಕುಸಿತವಾಗಿದೆ.