ಕಲ್ಯಾಣ ಕರ್ನಾಟಕ ಭಾಗದ 6 ರಿಂದ 8ನೇ ತರಗತಿಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (GPSTR) ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಲಬುರಗಿಯ ಹೈಕೋರ್ಟ್ ಪೀಠವು ಅತ್ಯಂತ ಮಹತ್ವದ ತೀರ್ಪು ನೀಡಿದ್ದು, ಈ ಹಿಂದೆ ಪ್ರಕಟಿಸಲಾಗಿದ್ದ ತಾತ್ಕಾಲಿಕ ಹಾಗೂ ಅಂತಿಮ ಆಯ್ಕೆ ಪಟ್ಟಿಗಳನ್ನು ರದ್ದುಗೊಳಿಸಿದೆ.
Sponsoredರಾಜ್ಯ ಸರ್ಕಾರವು 15 ಸಾವಿರ ಜಿಪಿಎಸ್‌ಟಿಆರ್ ಶಿಕ್ಷಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಆದರೆ, ಸಂವಿಧಾನದ 371 (ಜೆ) ಕಲಂ ತಿದ್ದುಪಡಿಯ ಅನ್ವಯ ಕಲ್ಯಾಣ ಕರ್ನಾಟಕ (ಎಚ್‌ಕೆ) ಮತ್ತು ಕಲ್ಯಾಣ ಕರ್ನಾಟಕೇತರ (ನಾನ್ ಎಚ್‌ಕೆ) ವೃಂದದ ಹುದ್ದೆಗಳ ಹಂಚಿಕೆ ಮತ್ತು ಮೀಸಲಾತಿ ನಿಗದಿಯಲ್ಲಿ ಗೊಂದಲ ಉಂಟಾಗಿತ್ತು. ಹೀಗಾಗಿ ಗೊಂದಲ ನಿವಾರಣೆಯಾಗುವವರೆಗೆ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಬೇಕು ಎಂದು ಕೋರಿ ನರೇಂದ್ರಬಾಬು ಜಿ.ವಿ. ಹಾಗೂ ಇತರರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ನ್ಯಾ. ಆರ್.ದೇವದಾಸ್ ಅವರಿದ್ದ ನ್ಯಾಯಪೀಠವು 6ರಿಂದ 8ನೇ ತರಗತಿಯ ಪದವೀಧರ ಶಾಲಾ ಶಿಕ್ಷಕರ (ಜಿಪಿಎಸ್‌ಟಿಆರ್) ನೇಮಕಾತಿಗೆ ಸಂಬಂಧಿಸಿದಂತೆ 2023ರ ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿದ್ದ ತಾತ್ಕಾಲಿಕ ಮತ್ತು ಅಂತಿಮ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಿ ಮಹತ್ವದ ಆದೇಶ ನೀಡಿದೆ.
ಹೈಕೋರ್ಟ್‌ನ ಈ ತೀರ್ಪಿನಿಂದಾಗಿ ಈಗಾಗಲೇ ಹುದ್ದೆಗೆ ಸೇರಿ ವಿವಿಧ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸೇವಾ ಭವಿಷ್ಯ ಈಗ ಅತಂತ್ರ ಸ್ಥಿತಿಗೆ ತಲುಪಿದೆ. ಹಳೆಯ ಆಯ್ಕೆ ಪಟ್ಟಿಯಂತೆ ನೇಮಕಗೊಂಡಿರುವ ಶಿಕ್ಷಕರ ವಿಚಾರದಲ್ಲಿ ಸರ್ಕಾರ ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದ್ದು, ಶಿಕ್ಷಣ ಇಲಾಖೆಯಿಂದ ಶೀಘ್ರವೇ ಸ್ಪಷ್ಟ ಮಾರ್ಗಸೂಚಿ ಹೊರಬೀಳುವ ನಿರೀಕ್ಷೆಯಿದೆ. ಹೊಸ ಪಟ್ಟಿ ಪ್ರಕಟವಾದ ನಂತರ ಹುದ್ದೆಗಳ ಸ್ಥಳವಾರು ಲಭ್ಯತೆ, ಕೌನ್ಸೆಲಿಂಗ್ ಪ್ರಕ್ರಿಯೆ ಮತ್ತು ಶಾಲಾ ಹಂಚಿಕೆಯ ಮಾನದಂಡಗಳು ಪ್ರಮುಖವಾಗಲಿದ್ದು, ಈ ಬಾರಿಯಾದರೂ ಇಡೀ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಹಾಗೂ ಡಿಜಿಟಲ್ ವ್ಯವಸ್ಥೆಯ ಮೂಲಕ ಪೂರ್ಣಗೊಳಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.




