ವಿಧಾನಸೌಧದ ಮೆಟ್ಟಿಲು ಮೇಲೆ ರಾಜ್ಯ ಸರ್ಕಾರವು ಉರ್ದು ಹಬ್ಬ ಆಚರಣೆ ಮಾಡಲು ನಿರ್ಧರಿಸಿದೆ. ಇದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ.


ಉರ್ದು ದಿನಾಚರಣೆಯ ಅಂಗವಾಗಿ ನವೆಂಬರ್ 9 ರಂದು ವಿಧಾನಸೌಧದಲ್ಲಿ ’ಉರ್ದು ಹಬ್ಬ’ ಆಚರಣೆ ಮಾಡಲು ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ ಮತ್ತು ಹಜ್ ಇಲಾಖೆ ಮುಂದಾಗಿದೆ. ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್‌ಗಳಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲು ನಿರ್ಧಾರ ಮಾಡಲಾಗಿದೆ. ಆದರೆ, ಇದಕ್ಕೆ ಬಿಜೆಪಿ ಮತ್ತು ಕರವೇ ಆಕ್ಷೇಪ ವ್ಯಕ್ತಪಡಿಸಿದೆ.
ಉರ್ದು ಹಬ್ಬಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಸುರೇಶ್ ಕುಮಾರ್ ತಮ್ಮ ಅಸಮಾಧಾನವನ್ನು ಹಂಚಿಕೊಂಡಿದ್ದಾರೆ. ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ವಿಧಾನಸೌಧದ ಮಟ್ಟಿಲುಗಳ ಮೇಲೆ ಉರ್ದು ದಿನಾಚರಣೆ ಆಚರಿಸುವ ಸಿದ್ಧತೆ ನಡೆಸುತ್ತಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ. *ನವೆಂಬರ್ 9* ರಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಉರ್ದು ಸಂಸ್ಕೃತಿ , ಪುಸ್ತಕ, ಆಹಾರ ಮತ್ತು ವಿವಿಧ ಕಲಾ ಪ್ರಕಾರಗಳನ್ನು ವಿಧಾನ ಸೌಧದ ಭವ್ಯ ವೇದಿಕೆಯ ಮೇಲೆ ಪರಿಚಯಿಸುವ ಉದ್ದೇಶ ಹೊಂದಲಾಗಿದೆ ಎಂದು ಸಚಿವ ಖಾದರ್ ಹೇಳಿದ್ದಾರೆ. ಇಲ್ಲಿ ಪ್ರಶ್ನೆ ಉರ್ದುವಿನದ್ದಲ್ಲ! ಬದಲಿಗೆ ಅದು ಸರ್ಕಾರದ ಆದ್ಯತೆಯದ್ದಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಇನ್ನೂ ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ, ವಿಧಾನಸೌಧದ ಮೆಟ್ಟಿಲುಗಳ ಮೇಲೆ ರಾಜ್ಯ ಸರ್ಕಾರ ಉರ್ದು ಹಬ್ಬ ಆಯೋಜಿಸುವ ನಿರ್ಧಾರ ಮಾಡಿದೆ ಎಂಬ ಮಾಧ್ಯಮ ವರದಿಗಳನ್ನು ಗಮನಿಸಿದೆ. ಇದೊಂದು ಅವಿವೇಕದ, ಅಪ್ರಬುದ್ಧ, ದುರಹಂಕಾರದ ನಡೆ. ಏನು ಮಾಡಿದರೂ ನಡೆಯುತ್ತದೆ ಎಂಬ ಅಧಿಕಪ್ರಸಂಗದ ನಿಲುವು. ಸರ್ಕಾರವೇ ಮುಂದೆ ನಿಂತು ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡಲು ನಿಂತ ಹಾಗೆ ಕಾಣುತ್ತಿದೆ. ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ವಾಗಿ ಖಂಡಿಸುವುದು ಮಾತ್ರವಲ್ಲ, ಈ ಕಾರ್ಯಕ್ರಮ ನಡೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ.
ನಾವು ಉರ್ದು ಸೇರಿದಂತೆ ಯಾವುದೇ ಭಾಷೆಯ ವಿರೋಧಿಗಳಲ್ಲ. ಉರ್ದು ಹಬ್ಬ ಮಾಡಲು ಬೆಂಗಳೂರಿನಲ್ಲಿ ಬೇಕಾದಷ್ಟು ಜಾಗಗಳಿವೆ. ನಾಡಿನ ಶಕ್ತಿಸೌಧ ವಿಧಾನಸೌಧವೇ ಬೇಕಾಗಿಲ್ಲ. ರಾಜ್ಯ ಸರ್ಕಾರವೇ ಮುಂದೆ ನಿಂತು ನಾಡಿನ ನೆಮ್ಮದಿಯನ್ನು, ಸೌಹಾರ್ದವನ್ನು ಹಾಳುಗೆಡವಲು ನಿಂತರೆ ನಾವು ಸುಮ್ಮನಿರುವುದಿಲ್ಲ. ಸರ್ಕಾರ ಏನಾದರೂ ತಾನು ಮಾಡಿದ್ದೆ ಸರಿ ಎಂದು ದುಸ್ಸಾಹಸಕ್ಕೆ ಇಳಿದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ನಾರಾಯಣಗೌಡರು ಎಚ್ಚರಿಕೆ ನೀಡಿದ್ದಾರೆ.

