ಭಾನುವಾರ, 25 ಅಕ್ಟೋಬರ್ 2026
Trending

MP: SSLC ಪರೀಕ್ಷೆ ಬರೆಯುವಾಗ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ!!

MP: 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಗಣಿತ ಪರೀಕ್ಷೆ(Board Exam) ಬರೆಯುತ್ತಿದ್ದಾಗಲೇ ಪರೀಕ್ಷಾ ಕೇಂದ್ರವೊಂದರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಆಶ್ಚರ್ಯಕರ ಘಟನೆ ನಡೆದಿದೆ.

Sponsored

ಈ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಪಿತಾಂಬುರ ಸೆಕ್ಟರ್-1 ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯೊಂದರಲ್ಲಿ  ನಡೆದಿದೆ. ವಿದ್ಯಾರ್ಥಿನಿ ಗಣಿತ ಪರೀಕ್ಷೆಯನ್ನು ಬರೆಯುತ್ತಿದ್ದಾಗ ಇದ್ದಕ್ಕಿದ್ದಂತೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದೆ. ಕೂಡಲೇ ಆಕೆ ಶಾಲೆಯ ಶೌಚಾಲಯಕ್ಕೆ ತೆರಳಿದ್ದಾಳೆ. ಸುಮಾರು 15 ನಿಮಿಷಗಳ ಕಾಲ ಆಕೆ ಹೊರಗೆ ಬರದಿದ್ದಾಗ, ಅನುಮಾನಗೊಂಡ ಪರೀಕ್ಷಾ ಮೇಲ್ವಿಚಾರಕರು ಶಾಲೆಯ ಮಹಿಳಾ ಸಿಬ್ಬಂದಿಯನ್ನು ಪರಿಶೀಲನೆಗೆ ಕಳುಹಿಸಿದ್ದಾರೆ. ಮಹಿಳಾ ಸಿಬ್ಬಂದಿ ಶೌಚಾಲಯದ ಬಳಿ ಹೋದಾಗ ಮಗುವಿನ ಅಳುವಿನ ಶಬ್ದ ಕೇಳಿಬಂದಿದೆ. 

ತಕ್ಷಣವೇ ಶಾಲಾ ಆಡಳಿತ ಮಂಡಳಿ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಮಾಹಿತಿ ತಿಳಿದ ಕೂಡಲೇ ಆಂಬುಲೆನ್ಸ್ ಮೂಲಕ ತಾಯಿ ಮತ್ತು ನವಜಾತ ಶಿಶುವನ್ನು ಪಿತಾಂಬುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಈ ಘಟನೆಯು ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದು, ಬಾಲಕಿಯ ಕುಟುಂಬದವರು ತಮಗೆ ಈ ಗರ್ಭಧಾರಣೆಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. 

ಪ್ರಾಥಮಿಕ ವಿಚಾರಣೆಯ ವೇಳೆ, ಬಾಲಕಿಯು ತಾನು ಕಳೆದ ಎರಡು ವರ್ಷಗಳಿಂದ ವ್ಯಕ್ತಿಯೊಬ್ಬನೊಂದಿಗೆ ಸಂಬಂಧ ಹೊಂದಿದ್ದಾಗಿ ಮತ್ತು ಕಳೆದ ಒಂದು ವರ್ಷದಿಂದ ದೈಹಿಕ ಸಂಬಂಧ ಹೊಂದಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ. ಇದರಿಂದಾಗಿ ಆಕೆ ಗರ್ಭಿಣಿಯಾಗಿದ್ದಳು ಎಂದು ಉಪನಿರೀಕ್ಷಕಿ ಚಾಂದಿನಿ ಸಿಂಘರ್ ತಿಳಿಸಿದ್ದಾರೆ. ಪೊಲೀಸರು ಈ ಸಂಬಂಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆಗಾಗಿ ಪ್ರಕರಣವನ್ನು ಬೆಟ್ಮಾ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.