ಬೆಂಗಳೂರು: ರಾಜ್ಯದಲ್ಲಿ ಆತಂಕಕ್ಕೆ ಕಾರಣವಾಗಿರುವ ನಕಲಿ ಹಾಗೂ ಕಳಪೆ ಔಷಧ ಮಾರಾಟ ಜಾಲದ ತನಿಖೆ ಇದೀಗ ಅಂತಾರಾಷ್ಟ್ರೀಯ ಮಟ್ಟದ ಸಂಪರ್ಕವನ್ನು ಬಯಲಿಗೆಳೆದಿದೆ. ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗಿರುವ ನಾಗರಬಾವಿಯ ಪ್ರಶಾಂತ್ ಹಾಗೂ ಆತನ ಇಬ್ಬರು ಸಹಚರರು ಪಶ್ಚಿಮ ಏಷ್ಯಾದ ದೇಶವೊಂದರ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ ಸಿಕ್ಕಿದ್ದಾರೆ ಎನ್ನಲಾಗಿದೆ.
Sponsoredಪಶ್ಚಿಮ ಏಷ್ಯಾದ ಕೆಲ ದೇಶಗಳಲ್ಲಿ ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಗಳು ಕಡಿಮೆ ದರದಲ್ಲಿ ಲಭ್ಯವಾಗುತ್ತವೆ. ಇದನ್ನು ಬಳಸಿಕೊಂಡು ಕೋಟ್ಯಂತರ ರೂಪಾಯಿ ಮೌಲ್ಯದ ಔಷಧಗಳನ್ನು ಅಕ್ರಮವಾಗಿ ಭಾರತಕ್ಕೆ ಸಾಗಿಸಲು ಪ್ರಶಾಂತ್ ತನ್ನ ಸಹಚರರ ಮೂಲಕ ಯೋಜನೆ ರೂಪಿಸಿದ್ದ ಎನ್ನಲಾಗಿದೆ.
ದೊಡ್ಡ ಪ್ರಮಾಣದ ಔಷಧಗಳನ್ನು ಸಾಗಿಸುತ್ತಿದ್ದುದನ್ನು ಗಮನಿಸಿದ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅನುಮಾನಗೊಂಡು ತಪಾಸಣೆ ನಡೆಸಿದ್ದಾರೆ. ಈ ವೇಳೆ ಅಕ್ರಮ ಔಷಧ ಸಾಗಣೆ ಪ್ರಕರಣ ಬೆಳಕಿಗೆ ಬಂದಿದೆ.
ವಿಚಾರಣೆ ವೇಳೆ ಬಂಧಿತ ಸಹಚರರು ಪ್ರಶಾಂತ್ ಹೆಸರನ್ನು ಬಹಿರಂಗಪಡಿಸಿದ್ದು, ಬಳಿಕ ಅಧಿಕಾರಿಗಳು ಆತನನ್ನೂ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರಶಾಂತ್ ಪತ್ನಿ ಪೊಲೀಸರ ವಿಚಾರಣೆ ವೇಳೆ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.
ನಕಲಿ ಔಷಧಗಳ ಮಾರಾಟ ಜಾಲದ ತನಿಖೆ ಮುಂದುವರಿದಿದ್ದು, ಅಕ್ರಮ ಔಷಧ ಸಾಗಣೆಯ ಹಿಂದಿರುವ ಜಾಲ ಹಾಗೂ ಅದರ ಅಂತಾರಾಷ್ಟ್ರೀಯ ಸಂಪರ್ಕದ ಕುರಿತು ಹೆಚ್ಚಿನ ಮಾಹಿತಿ ತನಿಖೆಯಿಂದ ಹೊರಬರಬೇಕಿದೆ.




