ಶನಿವಾರ, 24 ಅಕ್ಟೋಬರ್ 2026

ಪ್ರಜ್ವಲ್ ರೇವಣ್ಣಗೆ ಗುಡ್ ನ್ಯೂಸ್ ಕೊಟ್ಟ ಕೋರ್ಟ್!!

ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುವಾಸ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ  ಸಲ್ಲಿಸಿದ್ದ ಬೇಡಿಕೆಯ ಅರ್ಜಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಭಾಗಶಃ ಪುರಸ್ಕರಿಸಿದೆ.

ಸಜಾ ಬಂಧಿಯಾಗಿ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಅವರಿಗೆ ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರೊಂದಿಗೆ ಒಳ ಸಂದರ್ಶನ ನಡೆಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ. ಒಳ ಸಂದರ್ಶನಕ್ಕೆ ಅವಕಾಶ ನೀಡುವಂತೆ ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿತ್ತು. ಇದೀಗ ಅರ್ಜಿಯನ್ನು ಮಾನ್ಯ ಮಾಡಿ ಒಳ ಸಂದರ್ಶನಕ್ಕೆ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದೆ.

ಈ ಕುರಿತು ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ಕಾರಾಗೃಹದ ನಿಯಮಾವಳಿಗಳು ಹಾಗೂ ಜೈಲು ಕೈಪಿಡಿಗೆ (Prisons Manual) ಒಳಪಟ್ಟು ಪ್ರಜ್ವಲ್ ರೇವಣ್ಣ ಅವರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ನ್ಯಾಯಾಲಯದ ಈ ಆದೇಶದಿಂದಾಗಿ ಜೈಲಿನಲ್ಲಿರುವ ಮಾಜಿ ಸಂಸದನಿಗೆ ತಮ್ಮ ಆಪ್ತರು ಹಾಗೂ ಸ್ನೇಹಿತರನ್ನು ಭೇಟಿಯಾಗಿ ಮಾತುಕತೆ ನಡೆಸಲು ಹಾದಿ ಸುಗಮವಾದಂತಾಗಿದೆ. ಜೈಲು ನಿಯಮಗಳಿಗೆ ಅನುಗುಣವಾಗಿಯೇ ಈ ಭೇಟಿಗೆ ಕಾಲಾವಕಾಶ ಹಾಗೂ ವ್ಯವಸ್ಥೆ ಮಾಡಲಾಗುವುದು ಎಂದು ಜೈಲು ಮೂಲಗಳು ತಿಳಿಸಿವೆ.