ಇತ್ತೀಚಿನ ದಿನಗಳಲ್ಲಿ ಅನೇಕ ಧಾರ್ಮಿಕ ಕ್ಷೇತ್ರಗಳಲ್ಲಿ ಹಾಗೂ ಕೆಲವು ಸಂಘ-ಸಂಸ್ಥೆಗಳಲ್ಲಿ ಸಾಮೂಹಿಕ ವಿವಾಹವನ್ನು ಏರ್ಪಡಿಸಲಾಗುತ್ತದೆ. ಸಾಮೂಹಿಕ ವಿವಾಹ ಅಂದ್ರೆ ಸಾಮಾನ್ಯವಾಗಿ ನವಜೋಡಿಗಳಿಗೆ ಬಟ್ಟೆ, ಆಭರಣ ಸೇರಿದಂತೆ ವಿವಿಧ ಉಡುಗೊರೆಗಳನ್ನು ನೀಡಲಾಗುತ್ತದೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ನೂತನ ದಂಪತಿಗಳಿಗೆ ಸೀಮೆ ಹಸುವನ್ನೇ ಉಡುಗೊರೆಯಾಗಿ ನೀಡಲಾಗಿದೆ.
ಬಾಗೇಪಲ್ಲಿ ತಾಲೂಕಿನ ಗಡಿದಂ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯದ ಬಳಿ ಎಸ್.ಎನ್. ಚಾರಿಟೇಬಲ್ ಟ್ರಸ್ಟ್ ವತಿಯಿಂದ 23ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬರೋಬ್ಬರಿ 106 ಜೋಡಿಗಳು ಸಾಮೂಹಿಕ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನೂತನ ದಂಪತಿಗಳಿಗೆ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಸೀಮೆ ಹಸುವನ್ನು ಉಡುಗೊರೆಯಾಗಿ ನೀಡಿದ್ದಾರೆ.
ನೂರಾರು ಜೋಡಿಗಳ ಸಾಮೂಹಿಕ ವಿವಾಹಕ್ಕೆ ಸಾಕ್ಷಿಯಾದ ಬಾಗೇಪಲ್ಲಿಯಲ್ಲಿ, ನವ ದಂಪತಿಗಳ ಬದುಕಿಗೆ ಆರ್ಥಿಕ ನೆರವಾಗಲಿ ಎಂಬ ಉದ್ದೇಶದಿಂದ ಸೀಮೆ ಹಸು ಹಾಗೂ ನಗದು ಉಡುಗೊರೆ ನೀಡಿರುವುದು ವಿಶೇಷವಾಗಿತ್ತು. ಸೀಮೆ ಹಸುವಿನ ಜೊತೆಗೆ 50 ಸಾವಿರ ರೂ. ನಗದು ಸಹಾಯವನ್ನೂ ನೀಡಲಾಗಿದೆ.
ಇನ್ನು ಸಾಮೂಹಿಕ ವಿವಾಹದ ಜೊತೆಗೆ ಶ್ರೀ ತಿರುಮಲ ತಿರುಪತಿ ದೇವಸ್ಥಾನದ ವತಿಯಿಂದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣೋತ್ಸವವನ್ನೂ ಆಯೋಜಿಸಲಾಗಿತ್ತು. ಸಚಿವ ಮುನಿಯಪ್ಪ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಹಾಗೂ ನಾಯಕರು ಭಾಗವಹಿಸಿದ್ದರು.




