ರಸ್ತೆ ಅಪಘಾತದಲ್ಲಿ ಕೋಳಿಗಳು ಸಾವಿಗೀಡಾದರೆ ಅವುಗಳಿಗೂ ಸೂಕ್ತ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಹೌದು, ಅಪಘಾತದಲ್ಲಿ ಕೋಳಿಗಳು ಸತ್ತರೆ ಅವುಗಳನ್ನು ‘ಜೀವಸಂಪತ್ತು’ ಹಾಗೂ ‘ಸರಕು’ ಎಂದೇ ಪರಿಗಣಿಸಬೇಕು ಮತ್ತು ಅವುಗಳ ಸಾವು ಹಾಗೂ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಬಳ್ಳಾರಿಯಲ್ಲಿ ನಡೆದಿದ್ದ ರಸ್ತೆ ಅಪಘಾತವೊಂದರಲ್ಲಿ ಸರಕು ಸಾಗಣೆ ವಾಹನದಲ್ಲಿದ್ದ ಕೋಳಿಗಳು ಸಾವನ್ನಪ್ಪಿದ್ದವು. ಈ ಘಟನೆಗೆ ಸಂಬಂಧಿಸಿದಂತೆ ಬಳ್ಳಾರಿಯ ಮೋಟಾರು ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣವು 4,51,000 ರೂಪಾಯಿ ಪರಿಹಾರ ಘೋಷಿಸಿತ್ತು. ಇದನ್ನು ಪ್ರಶ್ನಿಸಿ ರಿಲಯನ್ಸ್ ಜನರಲ್ ಇನ್ಸೂರೆನ್ಸ್ ಕಂಪನಿ ಅರ್ಜಿ ಸಲ್ಲಿಸಿತ್ತು. ಕೋಳಿಗಳನ್ನು ಜೀವಸಂಪತ್ತು ಅಥವಾ ಜಾನುವಾರು ಎಂದು ಪರಿಗಣಿಸಲು ಬರುವುದಿಲ್ಲ, ಹಾಗಾಗಿ ಪರಿಹಾರ ಮೊತ್ತವನ್ನು ಕಡಿಮೆ ಮಾಡಬೇಕು ಎಂದು ವಿಮಾ ಕಂಪನಿಯ ವಕೀಲರು ವಾದಿಸಿದ್ದರು.
ಇತ್ತ, ಕೋಳಿಗಳ ಮಾಲೀಕ ಕೆ. ವೀರನಾರಾಯಣಸ್ವಾಮಿ ಅವರು ತಮಗಾದ ಮಾನಸಿಕ ನೋವಿಗೆ ಹೆಚ್ಚುವರಿ ಪರಿಹಾರ ನೀಡಬೇಕೆಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಪಘಾತದಲ್ಲಿ ಬಹುತೇಕ ಕೋಳಿಗಳು ಮೃತಪಟ್ಟಿದ್ದವು ಹಾಗೂ ಉಳಿದ ಕೋಳಿಗಳನ್ನು ಸಾರ್ವಜನಿಕರು ತೆಗೆದುಕೊಂಡು ಹೋಗಿದ್ದರು ಎಂಬುದು ಅವರ ವಾದವಾಗಿತ್ತು.
ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಬಿ. ಗೀತಾ ಅವರಿದ್ದ ಏಕಸದಸ್ಯ ಪೀಠ, ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿ ಕರ್ನಾಟಕ ಮೋಟಾರು ವಾಹನ ನಿಯಮಗಳಲ್ಲಿ ಕೋಳಿಯ ಬಗ್ಗೆ ಸ್ಪಷ್ಟ ಉಲ್ಲೇಖವಿಲ್ಲದಿದ್ದರೂ, ಮೋಟಾರು ವಾಹನ ಕಾಯಿದೆ-1988ರ ಸೆಕ್ಷನ್ 2(13)ರ ಪ್ರಕಾರ ‘ಸರಕು’ ಎಂಬ ಪದವು ಜೀವಸಂಪತ್ತನ್ನು ಒಳಗೊಂಡಿರುತ್ತದೆ. ಕೋಳಿಗಳಿಗೂ ಜೀವವಿರುವುದರಿಂದ ಅವುಗಳನ್ನು ಜೀವಸಂಪತ್ತು ಮತ್ತು ಸರಕು ಎಂದು ಪರಿಗಣಿಸುವುದು ಸೂಕ್ತ. ಆದ್ದರಿಂದ ಮೃತಪಟ್ಟ ಕೋಳಿಗಳಿಗೆ ವಿಮಾ ಕಂಪನಿಯು ಪರಿಹಾರ ನೀಡಲೇಬೇಕು ಎಂದು ಅದೇಶಿಸಿದೆ.




