ಶನಿವಾರ, 24 ಅಕ್ಟೋಬರ್ 2026

ಉದ್ಯಮಿ ಡೇವಿಡ್ ಹತ್ಯೆ ಪ್ರಕರಣ – ಆರೋಪಿ ಕಾಲಿಗೆ ಗುಂಡೇಟು

ಕಾಪು ತಾಲೂಕಿನ ಮುದರಂಗಡಿಯಲ್ಲಿ ಉದ್ಯಮಿ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜಾ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ನಟೋರಿಯಸ್ ಗ್ಯಾಂಗ್‌ಸ್ಟರ್ ಅನುಜ್ ಪಾಟೀಲ್ (35) ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ಆರೋಪಿ ಅನೋಜ್ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು, ಆತನ ಕಾಲಿಗೆ ಗುಂಡೇಟು ನೀಡಲಾಗಿದೆ. ಇಂದು (ಆ.24) ಮುಂಜಾನೆ ಹೆಬ್ರಿ ಬಳಿ ಆರೋಪಿಯನ್ನು ಕರೆದೊಯ್ಯುವಾಗ ಮೂತ್ರ ವಿಸರ್ಜನೆಗೆ ವಾಹನ ನಿಲ್ಲಿಸುವಂತೆ ಹೇಳಿದ್ದ. ವಾಹನ ನಿಲ್ಲಿಸಿ ಕೆಳಗಿಳಿಸಿದಾಗ ಕಾನ್ಸ್‌ಟೇಬಲ್‌ಗಳ ಮೇಲೆ ಹಲ್ಲೆ ಮಾಡಿ ಆತ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಪೊಲೀಸರು ಆತನ ಕಾಲಿಗೆ ಗುಂಡೇಟು ನೀಡಿದ್ದಾರೆ.

ಗಾಯಗೊಂಡ ಗ್ಯಾಂಗ್‌ಸ್ಟರ್‌ನನ್ನು ಉಡುಪಿಯ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಧಿತ ಅನುಜ್ ಪಾಟೀಲ್ 2017ರಿಂದ ಕಾನೂನಿನ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದು, ಮುಂಬೈನಲ್ಲಿ ಅಂಡರ್‌ವರ್ಲ್ಡ್ ಚಟುವಟಿಕೆ ನಡೆಸುತ್ತಿದ್ದ. ಈತನ ವಿರುದ್ಧ ಮಹಾರಾಷ್ಟ್ರದ ಸಂಘಟಿತ ಅಪರಾಧ ತಡೆ ಕಾಯ್ದೆ (MCOCA) ಸೇರಿದಂತೆ ಮಹಾರಾಷ್ಟ್ರ, ಗುಜರಾತ್, ದಮನ್ ಮತ್ತು ದಿಯು ಹಾಗೂ ಕರ್ನಾಟಕದಲ್ಲಿ ಒಟ್ಟು 11 ಗಂಭೀರ ಪ್ರಕರಣಗಳು ದಾಖಲಾಗಿವೆ.