ಶನಿವಾರ, 24 ಅಕ್ಟೋಬರ್ 2026

ಮೂರು ತಿಂಗಳು BPL-APL ಕಾರ್ಡ್‌ ರದ್ದು ಮಾಡಲ್ಲ: ರಿಜ್ವಾನ್ ಅರ್ಷದ್

ಬೆಂಗಳೂರು: ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಬಿಪಿಎಲ್ ಅಥವಾ ಎಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸುವುದಿಲ್ಲ ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.ಮೈಸೂರಿನಲ್ಲಿ ಮಾತನಾಡಿದ ಅವರು, ಮುಂದಿನ ಮೂರು ತಿಂಗಳ ಕಾಲ ಯಾವುದೇ ಪಡಿತರ ಚೀಟಿ ರದ್ದು ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.

ಬಿಪಿಎಲ್ ಪಟ್ಟಿಯಲ್ಲಿ ಅನರ್ಹರು ಇರುವುದನ್ನು ಸರ್ಕಾರ ಗುರುತಿಸಿದೆ. ಆದರೆ, ಪ್ರಸ್ತುತ ಬಿಪಿಎಲ್ ಮಾನದಂಡಗಳು ಇಂದಿನ ಆರ್ಥಿಕ ಪರಿಸ್ಥಿತಿಗೆ ಹೊಂದಿಕೆಯಾಗುತ್ತಿಲ್ಲ. ಹೀಗಾಗಿ ಮಾನದಂಡಗಳಲ್ಲಿ ಬದಲಾವಣೆ ಅಗತ್ಯವಿದೆ ಎಂದರು. ಅನೇಕ ಅರ್ಹ ಕುಟುಂಬಗಳು ಬಿಪಿಎಲ್ ಸೌಲಭ್ಯದಿಂದ ಹೊರಗುಳಿದಿದ್ದು, ಅವರನ್ನು ಮತ್ತೆ ಪಟ್ಟಿಗೆ ಸೇರ್ಪಡೆಗೊಳಿಸಬೇಕಿದೆ. ಏಕಾಏಕಿ ಕಾರ್ಡ್‌ಗಳನ್ನು ರದ್ದುಪಡಿಸಿದರೆ ಬಡವರಿಗೆ ತೊಂದರೆಯಾಗಲಿದೆ ಎಂದು ಸಚಿವರು ಹೇಳಿದರು.

ಇದೇ ವೇಳೆ ಬಸವರಾಜ ರಾಯರೆಡ್ಡಿ ಅವರ ಮುಸ್ಲಿಂ ಧರ್ಮ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಯರೆಡ್ಡಿ ಅವರು ಯಾವುದೇ ಧರ್ಮವನ್ನು ಟೀಕಿಸದೆ ಮುಸ್ಲಿಂ ಧರ್ಮದ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದಾರೆ. ಅವರ ಹೇಳಿಕೆಯಲ್ಲಿ ತಪ್ಪು ಹುಡುಕುವ ಅಗತ್ಯವಿಲ್ಲ ಎಂದರು.

ರಾಯರೆಡ್ಡಿ ಅವರು ಮುಸ್ಲಿಂ ಧರ್ಮವೇ ಶ್ರೇಷ್ಠ ಎಂದು ಹೇಳಿಲ್ಲ. ಬಿಜೆಪಿ ಮಾತ್ರ ಸದಾ ಹಿಂದೂ-ಮುಸ್ಲಿಂ ವಿಚಾರವನ್ನೇ ರಾಜಕೀಯ ಅಜೆಂಡಾವಾಗಿ ಬಳಸಿಕೊಳ್ಳುತ್ತಿದೆ. ಬಿಜೆಪಿಯವರು ಬೇರೆ ಯಾವುದೇ ವಿಚಾರಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ರಿಜ್ವಾನ್ ಅರ್ಷದ್ ಆರೋಪಿಸಿದರು.