ಭಾನುವಾರ, 25 ಅಕ್ಟೋಬರ್ 2026

‘ಕರೆ ಬಂದರೂ ಬಿಗ್ ಬಾಸ್‌ಗೆ ಎಂಟ್ರಿ ಕೊಡಲ್ಲ ಎಂದಿದ್ಯಾಕೆ ಆ ನಟಿ..?! ಏನಿದು ರಿಯಲ್ ಕಹಾನಿ

ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್‌ 13ರ ಆರಂಭಕ್ಕೂ ಮುನ್ನವೇ ಸಂಭಾವ್ಯ ಸ್ಪರ್ಧಿಗಳ ಕುರಿತ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿದೆ. ಹಲವು ನಟ-ನಟಿಯರ ಹೆಸರುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಸ್ಯಾಂಡಲ್‌ವುಡ್‌ ನಟಿ ತಪಸ್ವಿನಿ ಪೂಣಚ್ಚ ಅವರ ಹೆಸರು ಕೂಡ ಬಿಗ್‌ಬಾಸ್‌ ಸ್ಪರ್ಧಿಗಳ ಪಟ್ಟಿಯಲ್ಲಿ ಹರಿದಾಡಿತ್ತು. ಇದೀಗ ಈ ಸುದ್ದಿಯ ಬಗ್ಗೆ ನಟಿಯೇ ಸ್ಪಷ್ಟನೆ ನೀಡಿದ್ದಾರೆ.

Sponsored

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುದ್ದಿ

Marriage AdMarriage AdSponsored

ಬಿಗ್‌ಬಾಸ್‌ ಕನ್ನಡದ ಹೊಸ ಸೀಸನ್‌ ಘೋಷಣೆಯಾದ ಬಳಿಕ ಸಂಭಾವ್ಯ ಸ್ಪರ್ಧಿಗಳ ಕುರಿತು ಹಲವು ಪಟ್ಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಇದೇ ಪಟ್ಟಿಗಳಲ್ಲಿ ತಪಸ್ವಿನಿ ಪೂಣಚ್ಚ ಅವರ ಹೆಸರೂ ಕಾಣಿಸಿಕೊಂಡಿತ್ತು. ಇದರಿಂದ ಅವರು ಈ ಬಾರಿ ಬಿಗ್‌ಬಾಸ್‌ ಮನೆ ಪ್ರವೇಶಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಂದಿರಲಿಲ್ಲ. ಇದರ ನಡುವೆಯೇ ಸೆಪ್ಟೆಂಬರ್‌ 3ರಂದು ತಪಸ್ವಿನಿ ಅವರ ಬಿಗ್‌ಬಾಸ್‌ ಎಂಟ್ರಿ ಕುರಿತು ಸುದ್ದಿಗಳು ಮತ್ತಷ್ಟು ಹರಿದಾಡಿದ್ದವು.

ಬಿಗ್‌ಬಾಸ್‌ ಬಗ್ಗೆ ತಪಸ್ವಿನಿ ಹೇಳಿದ್ದೇನು?

ವೈರಲ್‌ ಆಗುತ್ತಿರುವ ಸುದ್ದಿಗೆ ಪ್ರತಿಕ್ರಿಯಿಸಿರುವ ತಪಸ್ವಿನಿ ಪೂಣಚ್ಚ, ಬಿಗ್‌ಬಾಸ್‌ ಪ್ರವೇಶದ ವಿಚಾರವನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಮೂಲಕ ಸ್ಪಷ್ಟನೆ ನೀಡಿರುವ ಅವರು, ಈ ಕುರಿತು ಹರಿದಾಡುತ್ತಿರುವ ಮಾಹಿತಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ತಿಳಿಸಿದ್ದಾರೆ.

ತಾವು ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ಹೋಗಲು ಎಂದಿಗೂ ಪ್ರಯತ್ನಿಸಿಲ್ಲ. ಮುಂದೆಯೂ ಈ ಕಾರ್ಯಕ್ರಮದ ಭಾಗವಾಗುವ ಯಾವುದೇ ಉದ್ದೇಶ ತಮ್ಮದಲ್ಲ ಎಂದು ನಟಿ ಹೇಳಿದ್ದಾರೆ. ಅಲ್ಲದೆ, ಬಿಗ್‌ಬಾಸ್‌ ಕಡೆಯಿಂದ ಆಹ್ವಾನ ಬಂದರೂ ಕಾರ್ಯಕ್ರಮಕ್ಕೆ ತೆರಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ತಮ್ಮ ಅನುಮತಿ ಪಡೆಯದೆ ಇಂತಹ ಸುದ್ದಿಗಳನ್ನು ಪ್ರಕಟಿಸುವ ಮುನ್ನ ಮಾಧ್ಯಮಗಳು ಎಚ್ಚರಿಕೆ ವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

‘ಹರಿಕಥೆ ಅಲ್ಲ ಗಿರಿಕಥೆ’ ಮೂಲಕ ಪರಿಚಯ

ತಪಸ್ವಿನಿ ಪೂಣಚ್ಚ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ. ರಿಷಬ್‌ ಶೆಟ್ಟಿ ನಿರ್ಮಾಣದ ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದರು. ಸಿನಿಮಾದ ‘ಜೂನಿಯರ್‌ ಮೊನಾಲಿಸಾ’ ಹಾಡು ಕೂಡ ಅವರ ಜನಪ್ರಿಯತೆಗೆ ಕಾರಣವಾಗಿತ್ತು.

ಆಡಿಷನ್‌ ಮೂಲಕ ಚಿತ್ರತಂಡಕ್ಕೆ ಆಯ್ಕೆಯಾಗಿದ್ದ ತಪಸ್ವಿನಿ ಬಳಿಕ ಕೆಲವು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ‘ಗಜರಾಮ’ ಚಿತ್ರದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ.

ಸೆಪ್ಟೆಂಬರ್‌ 6ರಿಂದ ಬಿಗ್‌ಬಾಸ್‌ ಕನ್ನಡ 13

ಇನ್ನು ಬಿಗ್‌ಬಾಸ್‌ ಕನ್ನಡದ 13ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್‌ 6ರಂದು ಕಾರ್ಯಕ್ರಮದ ಗ್ರ್ಯಾಂಡ್‌ ಓಪನಿಂಗ್‌ ನಡೆಯಲಿದೆ ಎಂಬ ಮಾಹಿತಿ ಹರಿದಾಡುತ್ತಿದ್ದು, ಕಿಚ್ಚ ಸುದೀಪ್‌ ನಿರೂಪಕರಾಗಿ ಮರಳುತ್ತಿದ್ದಾರೆ.

ಈ ಬಾರಿ ಸೆಲೆಬ್ರಿಟಿ ಸ್ಪರ್ಧಿಗಳ ಜೊತೆಗೆ ‘ಬಿಗ್‌ಬಾಸ್‌ ಅಗ್ನಿಪರೀಕ್ಷೆ’ ಮೂಲಕ ಆಯ್ಕೆಯಾಗುವ ಸ್ಪರ್ಧಿಗಳಿಗೂ ಅವಕಾಶ ಸಿಗಲಿದೆ ಎಂಬ ಕುತೂಹಲವಿದೆ.

ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸ್ಪರ್ಧಿಗಳ ಪಟ್ಟಿಯಲ್ಲಿರುವ ಹೆಸರುಗಳನ್ನು ಅಧಿಕೃತವೆಂದು ಪರಿಗಣಿಸುವಂತಿಲ್ಲ. ತಪಸ್ವಿನಿ ಪೂಣಚ್ಚ ಅವರ ವಿಚಾರದಲ್ಲಿ, ನಟಿಯೇ ಸ್ವತಃ ಸ್ಪಷ್ಟನೆ ನೀಡಿರುವುದರಿಂದ ಬಿಗ್‌ಬಾಸ್‌ ಎಂಟ್ರಿ ಕುರಿತ ವದಂತಿಗೆ ತೆರೆ ಬಿದ್ದಿದೆ.