ಗ್ರಾಮಾಭಿವೃದ್ಧಿ ಯೋಜನೆಯ ಮಡಿಲಿಗೆ ‘ಅತ್ಯುತ್ತಮ ಮಹಿಳಾ ಸ್ನೇಹಿ ಆರ್ಥಿಕ ಸಂಸ್ಥೆ ಪ್ರಶಸ್ತಿ’
ಧರ್ಮಸ್ಥಳ: ಭಾರತೀಯ ರಿಸರ್ವ್ ಬ್ಯಾಂಕ್ ನಿಯೋಜಿತ ಸ್ವಯಂ ನಿಯಂತ್ರಕ ಸಂಸ್ಥೆಯಾದ ಸಾ-ಧನ್ ಸಂಸ್ಥೆಯು ಇತ್ತೀಚೆಗೆ ದೆಹಲಿಯಲ್ಲಿ ಆಯೋಜಿಸಿದ 21ನೇ ರಾಷ್ಟ್ರೀಯ ಸಮಾವೇಶದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ಗೆ ‘2025-2026ರ ಸಾಲಿನ ಅತ್ಯುತ್ತಮ ಮಹಿಳಾ ಸ್ನೇಹಿ ಆರ್ಥಿಕ ಸಂಸ್ಥೆ – ಇಲಾಬೆನ್ ಸ್ಮಾರಕ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.
Sponsoredಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹಗ್ಗಡೆಯವರು ಹಾಗೂ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ಯು ಮಹಿಳಾ ಕಾರ್ಯಕರ್ತರಿಗೆ ಅತೀ ಸುರಕ್ಷಿತ ಕಾರ್ಯಸ್ಥಳ ಮತ್ತು ಉತ್ತಮ ಬಾಂಧವ್ಯದ ವಾತಾವರಣವನ್ನು ನೀಡುವ ಮೂಲಕ ದೇಶಕ್ಕೆ ಮಾದರಿಯಾದ ಒಂದು ಸಂಸ್ಥೆಯಾಗಿರುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದೆ. ಈ ಪ್ರಶಸ್ತಿಯನ್ನು ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅನಿಲ್ ಕುಮಾರ್ ಎಸ್.ಎಸ್.. ಯೋಜನೆಯ ಮುಖ್ಯ ಹಣಕಾಸು ಅಧಿಕಾರಿಗಳಾದ ಶಾಂತರಾಮ್ ಆರ್. ಪೈ, ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ಗೀತಾ ಬಿ. ಮತ್ತು ಶ್ರೀಮತಿ ದಯಾಶೀಲರವರು ಸ್ವೀಕರಿಸಿದರು.
ಸಾಧನ್ ಸಂಸ್ಥೆಯು ದೇಶದ 210 ಆರ್ಥಿಕ ಸಂಸ್ಥೆಗಳ ನೋಂದಾವಣೆಯನ್ನು ಹೊಂದಿರುವ ಭಾರತೀಯ ರಿಸರ್ವ್ ಬ್ಯಾಂಕ್ ನಿಯೋಜಿತ ಸ್ವಯಂ ನಿಯಂತ್ರಕ ಸಂಸ್ಥೆಯಾಗಿದ್ದು ಇದು ಬ್ಯಾಂಕ್‌ಗಳು, ಬ್ಯಾಂಕಿನ ಬಿ.ಸಿ.ಪ್ರತಿನಿಧಿ ಸಂಸ್ಥೆಗಳು, ಎಂಬಿಎಫ್ ಸಿ, ಕಿರು ಫೈನಾನ್ಶಿಯಲ್ ಬ್ಯಾಂಕ್, ಕಿರು ಆರ್ಥಿಕ ಸಂಸ್ಥೆಗಳು, ಕೋ ಆಪರೇಟಿವ್ ಸೊಸೈಟಿಗಳನ್ನು ಸದಸ್ಯರನ್ನಾಗಿ ಹೊಂದಿದೆ.
ಗ್ರಾಮಾಭಿವೃದ್ಧಿ ಯೋಜನೆಯ ಒಟ್ಟು 41 ಸಾವಿರ ಕಾರ್ಯಕರ್ತರಲ್ಲಿ 29 ಸಾವಿರ ಮಂದಿ ಮಹಿಳಾ ಕಾರ್ಯಕರ್ತರಿದ್ದು ಅವರುಗಳಿಗೆ ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ಕೆಲಸ ನಿರ್ವಹಿಸಲು ಸಂಸ್ಥೆ ಅವಕಾಶ ಮಾಡಿಕೊಟ್ಟಿದೆ.
POSH ಕಾಯಿದೆಯ ಬಗ್ಗೆ ಆಯ್ದ ಪ್ರಮುಖ ಮಹಿಳಾ ಕಾರ್ಯಕರ್ತರಿಗೆ ವಿಶೇಷ ತರಬೇತಿಯನ್ನು ನೀಡಿ ರಾಜ್ಯದಾದ್ಯಂತ ಮಹಿಳೆಯರ ಸುರಕ್ಷತೆಗೆ ಅತಿ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗಿದೆ. ಮಹಿಳಾ ಕಾರ್ಯಕರ್ತರ ಸುರಕ್ಷತೆಗೆ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಿದ್ದಲ್ಲದೆ ಉಲ್ಲಂಘನೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ಪರಿಣಾಮಕಾರಿಯಾದ ವ್ಯವಸ್ಥೆಯನ್ನು ಸಂಸ್ಥೆಯು ಹೊಂದಿದೆ.
ಹೇಮಾವತಿ ವೀ.ಹೆಗ್ಗಡೆಯವರ ಮಾರ್ಗದರ್ಶನದಂತೆ ಪ್ರಸ್ತುತ 6,547 ಮಹಿಳಾ ಜ್ಞಾನವಿಕಾಸ ಕೇಂದ್ರಗಳ ಮೂಲಕ 3,29,609 ಸದಸ್ಯರು ಸರ್ವಾಂಗೀಣ ಅಭಿವೃದ್ಧಿ ಹೊಂದಿದ್ದಾರೆ. ಹಾಗೆಯೇ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಸೇವೆಯ ಮೂಲಕ ಸುಮಾರು 42 ಲಕ್ಷ ಮಹಿಳೆಯರು ಬ್ಯಾಂಕಿನಿಂದ ಅತಿ ಕಡಿಮೆ ಬಡ್ಡಿದರದಲ್ಲಿ ಆರ್ಥಿಕ ಸಾಲ ಸೌಲಭ್ಯವನ್ನು ಪಡೆದುಕೊಂಡು ತಮ್ಮ ಬದುಕನ್ನು ಕಟ್ಟಿಕೊಂಡಿರುವುದಲ್ಲದೇ ಸಾಮಾಜಿಕವಾಗಿಯೂ ಅಭಿವೃದ್ಧಿಗೊಂಡು ನಿಜವಾದ ಅರ್ಥದಲ್ಲಿ ನಾರಿಶಕ್ತಿಗಳಾಗಿದ್ದಾರೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅನಿಲ್ ಕುಮಾರ್ ಎಸ್.ಎಸ್.ರವರು ಉಲ್ಲೇಖಿಸಿ ಅವರನ್ನು ಅಭಿನಂದಿಸಿರುತ್ತಾರೆ.




