ಬೆಂಗಳೂರಿನಲ್ಲಿ ನೆಲೆಸಿರುವ ಕಂಪನಿಯೊಂದು ಉದ್ಯೋಗಾವಕಾಶದಲ್ಲಿ ಕನ್ನಡಿಗರನ್ನು ಕಡೆಗಣಿಸಿ, ನಿರ್ದಿಷ್ಟ ರಾಜ್ಯದ ಜನರಿಗೆ ಮಾತ್ರ ಆದ್ಯತೆ ನೀಡುವ ಮೂಲಕ ಪ್ರಾದೇಶಿಕ ತಾರತಮ್ಯ ಎಸಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಬೆಂಕಿ ಕಾರಿದ್ದಾರೆ.
ಹೌದು, ರಾಜಧಾನಿ ಬೆಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಖಾಸಗಿ ಕಂಪನಿಯ ಜನರಲ್ ಮ್ಯಾನೇಜರ್ ಹಾಗೂ ಎಚ್ಆರ್ ಟೀಮ್ ಹೆಡ್ ಆಗಿರುವ ಬಾಲ ಎಂ. ಎಂಬುವರು ಎರಡು ದಿನಗಳ ಹಿಂದೆ ವೃತ್ತಿಪರ ಜಾಲತಾಣ ಲಿಂಕ್ಡ್ಇನ್ನಲ್ಲಿ (LinkedIn) ಉದ್ಯೋಗ ಪ್ರಕಟಣೆಯೊಂದನ್ನು ಪೋಸ್ಟ್ ಮಾಡಿದ್ದರು. ಬೆಂಗಳೂರು, ತಮಿಳುನಾಡಿನ ಕೊಯಮತ್ತೂರು ಹಾಗೂ ನಮಕ್ಕಲ್ ನಗರಗಳಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯ ಡೇಟಾ ಅನಾಲಿಸ್ಟ್ ಹುದ್ದೆಗೆ “ತಮಿಳುನಾಡು ಮೂಲದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು, ಬೇರೆ ರಾಜ್ಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಾರದು” ಎಂದು ಬಹಿರಂಗವಾಗಿಯೇ ಉಲ್ಲೇಖಿಸಿದ್ದರು. ಈ ತಾರತಮ್ಯದ ಪೋಸ್ಟ್ ಅನ್ನು ಕರಣ್ ಗೌಡ ಎಂಬುವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಂತೆ ವಿವಾದ ಕಾಡ್ಗಿಚ್ಚಿನಂತೆ ಹರಡಿದೆ
ಕನ್ನಡಿಗರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕಂಪನಿಯ ಎಚ್ಆರ್ ಮ್ಯಾನೇಜರ್, ವಿವಾದಾತ್ಮಕ ಷರತ್ತನ್ನು ಹಿಂಪಡೆದಿದ್ದಾರೆ. ಆದಾಗ್ಯೂ, “ಕರ್ನಾಟಕದ ರಾಜಧಾನಿಯಲ್ಲೇ ನೆಲೆಯೂರಿ ಉದ್ಯೋಗ ನೀಡುವಾಗ ಕನ್ನಡಿಗರಿಗೆ ಈ ರೀತಿ ಅನ್ಯಾಯ ಮಾಡಲು ಹೇಗೆ ಸಾಧ್ಯ? ಸ್ಥಳೀಯರಿಗೆ ಉದ್ಯೋಗ ನೀಡದೆ ತಾರತಮ್ಯ ಎಸಗುತ್ತಿರುವ ಇಂತಹ ಕಂಪನಿಗಳ ವಿರುದ್ಧ ರಾಜ್ಯ ಸರ್ಕಾರ ಹಾಗೂ ಕಾರ್ಮಿಕ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಸಾರ್ವಜನಿಕರು ಹಾಗೂ ಕನ್ನಡಪರ ಹೋರಾಟಗಾರರು ತೀವ್ರವಾಗಿ ಆಗ್ರಹಿಸಿದ್ದಾರೆ.