Home » ಬೆಳ್ತಂಗಡಿ ಅಭಿವೃದ್ಧಿಗೆ ಸಿಎಂಗೆ ಬೇಡಿಕೆಗಳ ಪಟ್ಟಿ-ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ನಿರೀಕ್ಷೆ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸುದ್ದಿಗೋಷ್ಠಿ

ಬೆಳ್ತಂಗಡಿ ಅಭಿವೃದ್ಧಿಗೆ ಸಿಎಂಗೆ ಬೇಡಿಕೆಗಳ ಪಟ್ಟಿ-ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ನಿರೀಕ್ಷೆ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸುದ್ದಿಗೋಷ್ಠಿ

0 comments
Rakshith Shivaram

ಬೆಳ್ತಂಗಡಿ: ಪ್ರಥಮ ಬಾರಿಗೆ ಮಂಗಳೂರಿನಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಯಲ್ಲಿ ಬೆಳ್ತಂಗಡಿ ತಾಲೂಕಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳನ್ನು ಮಂಡಿಸಿದ್ದೇನೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದರು.

ಅವರು ಸೆ.15ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವೇಷ ಭಕ್ತರಾಗುವುದು ಬೇಡ, ದೇಶಭಕ್ತರಾಗಬೇಕು.ಇಷ್ಟು ದಿನ ದ್ವೇಷ, ಹೊಡೆ-ಬಡಿ ರಾಜಕಾರಣವಿತ್ತು, ಈಗ ಶಾಂತವಾಗಿದೆ. ಕೇರಳ, ಗೋವಾಗೆ ಹೋಲಿಸಿದರೆ ನಮ್ಮ ರಾಜ್ಯ ಪ್ರವಾಸೋದ್ಯಮದಲ್ಲಿ ಹಿಂದಿದೆ. ಬೆಳ್ತಂಗಡಿಯ ಅಭಿವೃದ್ಧಿ ಮತ್ತು ಪ್ರವಾಸೋದ್ಯಮಕ್ಕೆ ಒತ್ತು ನೀಡಿ ತಾಲೂಕಿನ ಅಸ್ಮಿತೆಯನ್ನು ಉಳಿಸಿ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಬೇಕು, ಡಿಸಿ ಮನ್ನಾ ಭೂಮಿಯನ್ನು ಶೀಘ್ರ ಪೂರೈಸಬೇಕು, ಕಸ್ತೂರಿ ರಂಗನ್ ವರದಿಯನ್ನು ಬಹಿಷ್ಕರಿಸಬೇಕು, 9/11 ಸಮಸ್ಯೆ ಬಗೆಹರಿಯಬೇಕು ಎಂದರು.

ತಾಲೂಕಿಗೆ ವರ್ಷಕ್ಕೆ ಒಂದೂವರೆ ಕೋಟಿ ಪ್ರವಾಸಿಗರು ಬರುತ್ತಾರೆ, ಆದರೆ ಕೇವಲ ಮೂರು ಗಂಟೆ ಮಾತ್ರ ಇಲ್ಲಿ ಇರುತ್ತಾರೆ. ಅವರು ಹೆಚ್ಚು ಸಮಯ ಇರಬೇಕಾದರೆ ಇಲ್ಲಿನ ಪ್ರವಾಸಿ ತಾಣಗಳು ಅಭಿವೃದ್ಧಿಯಾಗಬೇಕು. ಜಮಲಾಬಾದ್ ಕೋಟೆ, ದೇವಸ್ಥಾನಗಳು, ಕಾಜೂರು ದರ್ಗಾ ಹಾಗೂ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು.

ಬೆಳ್ತಂಗಡಿಗೆ ಎಲೆಕ್ನಿಕ್ ಬಸ್ ಬೇಕು, ಬಸ್ ನಿಲ್ದಾಣ ಮತ್ತು ಡಿಪೋ ಅಭಿವೃದ್ಧಿಪಡಿಸಬೇಕು ಎಂದು ಸಿಎಂಗೆ ಬೇಡಿಕೆ ಇಟ್ಟಿದ್ದೇನೆ ಎಂದರು.ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆ ಬಗ್ಗೆ ಮಾತನಾಡಿದ ಅವರು, ಹಾಲಿ ಶಾಸಕರು ನನ್ನ ಕೈಯಲ್ಲಿ ಆಗಲ್ಲ ಎಂದು ಹೇಳಲಿ, ನಾವು ಮಾಡುತ್ತೇವೆ. ಶಾಸಕರು ಸಂಪುಟ ಸಭೆಗೆ ಮೂರು ದಿನ ಇರುವಾಗ 20 ಪುಟಗಳ ಬೇಡಿಕೆ ಪಟ್ಟಿ ನೀಡುತ್ತಾರೆ. ಅಧಿವೇಶನದಲ್ಲಿ ಜಿಲ್ಲೆ, ಕರಾವಳಿ ಬಗ್ಗೆ ಯಾವುದೇ ಚರ್ಚೆ ಮಾಡುವುದಿಲ್ಲ. ಜಿಲ್ಲೆಯಲ್ಲಿ 6 ಜನ ಬಿಜೆಪಿ ಶಾಸಕರಿದ್ದು ಏನು ಮಾಡಿದರು ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖ‌ರ್ ಕುಕ್ಕೇಡಿ, ನಗರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಾಫಿ ಉಪಸ್ಥಿತರಿದ್ದರು.

You may also like