ಸೋಮವಾರ, 26 ಅಕ್ಟೋಬರ್ 2026
Trending

1000 ಚ.ಮೀ.ವರೆಗಿನ ಏಕ ನಿವೇಶನ ಲೇಔಟ್ ಅನುಮೋದನೆಗೆ ಪಿಡಿಒಗಳಿಗೆ ಅಧಿಕಾರ

Rakshith Shivaram

ಬೆಳ್ತಂಗಡಿ : ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1000 ಚದರ ಮೀಟರ್‌ವರೆಗಿನ ಏಕ ನಿವೇಶನ (Single Plot/Single Layout) ಲೇಔಟ್ ಪ್ಲಾನ್‌ಗಳಿಗೆ ಅನುಮೋದನೆ ನೀಡುವ ಅಧಿಕಾರವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ (PDO) ವಹಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಸ್ವಾಗತಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

Sponsored

ಸಣ್ಣ ಪ್ರಮಾಣದ ನಿವೇಶನ ಹೊಂದಿರುವ ಗ್ರಾಮೀಣ ಭಾಗದ ಜನರು ತಮ್ಮ ಮನೆ ನಿರ್ಮಾಣಕ್ಕಾಗಿ ಲೇಔಟ್ ಅಥವಾ ನಿವೇಶನ ಸಂಬಂಧಿತ ಅನುಮೋದನೆ ಪಡೆಯಲು ಈ ಹಿಂದೆ ವಿವಿಧ ಹಂತಗಳ ಕಚೇರಿಗಳಿಗೆ ತೆರಳಿ ಸಮಯ ಮತ್ತು ಹಣ ವ್ಯಯಿಸಬೇಕಾಗುತ್ತಿತ್ತು. ಇದರಿಂದ ಸಾರ್ವಜನಿಕರಿಗೆ ಅನಗತ್ಯ ವಿಳಂಬ ಹಾಗೂ ತೊಂದರೆ ಉಂಟಾಗುತ್ತಿತ್ತು.

Advertisement

ಈ ಸಮಸ್ಯೆಯನ್ನು ಪರಿಹರಿಸುವಂತೆ ಹಾಗೂ ಗ್ರಾಮೀಣ ಜನರಿಗೆ ಸ್ಥಳೀಯ ಮಟ್ಟದಲ್ಲೇ ತ್ವರಿತವಾಗಿ ಸೇವೆ ದೊರೆಯುವಂತೆ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿ ವಿನಂತಿಸಲಾಗಿತ್ತು ಇದೀಗ ಸರ್ಕಾರವು ಈ ಮನವಿಗೆ ಸ್ಪಂದಿಸಿ, 1000 ಚದರ ಮೀಟರ್‌ವರೆಗಿನ ಏಕ ನಿವೇಶನ ಲೇಔಟ್ ಪ್ಲಾನ್ ಅನುಮೋದನೆ ಅಧಿಕಾರವನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಪಿಡಿಒಗಳಿಗೆ ನೀಡಿರುವುದು ಸ್ವಾಗತಾರ್ಹ ಮತ್ತು ಜನಪರ ಕ್ರಮವಾಗಿದೆ.

ಈ ನಿರ್ಧಾರದಿಂದ ಗ್ರಾಮೀಣ ಪ್ರದೇಶದ ಸಾಮಾನ್ಯ ಜನರು ಹಿರಿಯ ಅಧಿಕಾರಿಗಳ ಕಚೇರಿಗಳಿಗೆ ಪದೇಪದೇ ಅಲೆದಾಡುವ ಪರಿಸ್ಥಿತಿ ತಪ್ಪಲಿದೆ. ಕಡತಗಳ ವಿಲೇವಾರಿ ವೇಗವಾಗಿ ನಡೆಯುವುದರಿಂದ ಮನೆ ನಿರ್ಮಾಣದ ಕನಸು ಹೊಂದಿರುವ ಅನೇಕ ಕುಟುಂಬಗಳಿಗೆ ಅನುಕೂಲವಾಗಲಿದೆ. ಮಧ್ಯವರ್ತಿಗಳ ಹಸ್ತಕ್ಷೇಪ ಕಡಿಮೆಯಾಗುವುದರ ಜೊತೆಗೆ, ಸಾರ್ವಜನಿಕರ ಸಮಯ ಮತ್ತು ಹಣವೂ ಉಳಿತಾಯವಾಗಲಿದೆ.

ಸ್ಥಳೀಯವಾಗಿ ಕಾರ್ಯನಿರ್ವಹಿಸುವ ಪಿಡಿಒ ಹಾಗೂ ತಾಂತ್ರಿಕ ಸಿಬ್ಬಂದಿಗೆ ಸ್ಥಳದ ಭೌಗೋಳಿಕ ಪರಿಸ್ಥಿತಿ, ರಸ್ತೆ ಸಂಪರ್ಕ ಮತ್ತು ಸ್ಥಳೀಯ ವಾಸ್ತವಾಂಶಗಳ ಬಗ್ಗೆ ಉತ್ತಮ ಅರಿವು ಇರುವುದರಿಂದ, ನಿಗದಿತ ನಿಯಮಾವಳಿಗಳಂತೆ ಅರ್ಜಿಗಳನ್ನು ಪರಿಶೀಲಿಸಿ ಸೂಕ್ತವಾಗಿ ವಿಲೇವಾರಿ ಮಾಡಲು ಈ ಅಧಿಕಾರ ವಿಕೇಂದ್ರೀಕರಣ ಸಹಕಾರಿಯಾಗಲಿದೆ.

ವಿಶೇಷವಾಗಿ ಸಣ್ಣ ನಿವೇಶನ ಹೊಂದಿರುವ ರೈತರು, ಕಾರ್ಮಿಕರು, ಮಧ್ಯಮ ವರ್ಗದ ಕುಟುಂಬಗಳು ಹಾಗೂ ಗ್ರಾಮೀಣ ಭಾಗದ ಸಾಮಾನ್ಯ ನಾಗರಿಕರಿಗೆ ಈ ಕ್ರಮದಿಂದ ಹೆಚ್ಚಿನ ಪ್ರಯೋಜನವಾಗಲಿದೆ ಸರ್ಕಾರದ ಆಡಳಿತವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.