ಶನಿವಾರ, 24 ಅಕ್ಟೋಬರ್ 2026

ಜೈಲು ವಾರ್ಡರ್‌ ಮೇಲೆ ಹಲ್ಲೆ, ಕೊಲೆಗೆ ಯತ್ನ

ಬೆಂಗಳೂರು; ಕರ್ತವ್ಯನಿರತ ಜೈಲು ವಾರ್ಡರ್‌ ಮೇಲೆ ಜೈಲುವಾಸಿಗಳು ಹಲ್ಲೆ ಅವಾಚ್ಯ ಶಬ್ದಗಳಿಂದ ನಿಂದನೆ, ಮೂಗಿಗೆ ಗುದ್ದಿ ಕೊಲೆಗೆ ಯತ್ನ ಮಾಡಿರುವ ಘಟನೆ ಘಟನೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದೆ.

ಮಂಜುನಾಥ ಹವೇಲಿ ಹಲ್ಲೆಗೊಳಗಾದ ಜೈಲು ವಿಕ್ಷಕ. ಈ ಘಟನೆ ಸೆ.2, ಬೆಳಿಗ್ಗೆ 11.30 ರ ಸುಮಾರಿಗೆ ಘಟನೆ ನಡೆದಿದ್ದು, ಮಂಗಳೂರಿನ ಬಜರಂಗದಳ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಅವರ ಕೊಲೆ ಪ್ರಕರಣದ ಕೈದಿಗಳು ಈ ಕೃತ್ಯವೆಸಗಿದ್ದಾರೆ. ಮೊಹಮ್ಮದ್‌ ಮುಜಾಮಿಲ್‌, ಅಬ್ದುಲ್‌ ಶಫ್ಘಾನ್‌, ಮೊಹಮ್ಮದ್‌ ರಿಜ್ವಾನ್‌, ನಯಾಜ್‌, ಕಲಂದರ್‌ ಶಫಿಯಿಂದ ಕೊಲೆ ಯತ್ನ ನಡೆದಿದೆ ಎನ್ನಲಾಗಿದೆ.

5 ಮಂದಿ ಆರೋಪಿಗಳು ಮಂಜುನಾಥ್‌ ಅವರನ್ನು ಕೊಠಡಿ ಸಂಖ್ಯೆ 04 ಕ್ಕೆ ಎಳೆದೊಯ್ದು ಮೊದಲು ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಕುತ್ತಿಗೆಯನ್ನು ಬಲವಾಗಿ ಹಿಸುಕಿ, ಉಸಿರುಗಟ್ಟಿಸಿ ಕೊಲೆಗೆ ಯತ್ನ ಮಾಡಿದ್ದಾರೆ. ಅಷ್ಟರೊಳಗೆ ಕರ್ತವ್ಯನಿರತ ಇನ್ನುಳಿದ ಅಧಿಕಾರಿ ಮತ್ತು ಸಿಬ್ಬಂದಿಗಳು ಮಂಜುನಾಥ್‌ ಅವರನ್ನು ರಕ್ಷಣೆ ಮಾಡಿದ್ದಾರೆ.

ತಿಂಗಳ ಹಿಂದೆ ಜೈಲು ಬಂಧಿಗಳನ್ನು ಭದ್ರತಾ ವಿಭಾಗದಿಂದ ಅನೆಕ್ಸ್‌-1 ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿತ್ತು. ಮಂಜುನಾಥ್‌ ಹೆಚ್ಚುವರಿ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡಿರಲಿಲ್ಲ. ಬಂಧಿಗಳ ವಸ್ತುಗಳನ್ನು ತಪಾಸಣೆ ಮಾಡಿದ್ದಕ್ಕೆ ಮಂಜುನಾಥ್‌ ಮತ್ತು ಹಲ್ಲೆ ಮಾಡಿದ ಆರೋಪಿಗಳ ನಡುವೆ ಜಗಳ ಆಗಿತ್ತು. ಜೈಲಿನ ಅಕ್ರಮ ಚಟುವಟಿಕೆಗಳ ಕುರಿತು ಹಿರಿಯ ಅಧಿಕಾರಿಗಳಿಗೆ ತಿಳಿಸುತ್ತಿದ್ದ ಕಾರಣ, ಹಳೇ ದ್ವೇಷದ ಕಾರಣ ಸುಹಾಸ್‌ ಶೆಟ್ಟಿ ಕೊಲೆ ಆರೋಪಿಗಳಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ.

ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.