ಶನಿವಾರ, 24 ಅಕ್ಟೋಬರ್ 2026

‘ನಾಸಾ’ ಜೊತೆ ಒಪ್ಪಂದ ಮಾಡಿಕೊಂಡ ಚಿಕ್ಕಮಗಳೂರಿನ ಆಲ್ದೂರು ಯುವಕ!!

ಜಿಲ್ಲೆಯ ಆಲ್ದೂರು ಗ್ರಾಮದ ಯುವಕ ಅವೈಸ್ ಅಹ್ಮದ್ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಸಾಧನೆ ಮಾಡಿದ್ದು, ನಾಸಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟಪ್ ‘ಪಿಕ್ಸೆಲ್’ ಸಂಸ್ಥೆಯ ಸಹ-ಸ್ಥಾಪಕರಾದ ಅವೈಸ್ ನಾಸಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ಮೂಲಕ ನಾಸಾದೊಂದಿಗೆ ಒಪ್ಪಂದ ಮಾಡಿಕೊಂಡ ಮೊದಲ ಭಾರತೀಯ ಖಾಸಗಿ ಬಾಹ್ಯಾಕಾಶ ಸ್ಟಾರ್ಟಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಏನಿದು ಪಿಕ್ಸೆಲ್ ಕಂಪೆನಿ?

ಭೂಮಿಯನ್ನು ಬಹಳ ಸೂಕ್ಷ್ಮವಾಗಿ ಅಧ್ಯಯನ ಮಾಡಲು ನೆರವಾಗುವಂತಹ ಬಲಿಷ್ಠ ಉಪಗ್ರಹಗಳನ್ನು ಪಿಕ್ಸೆಲ್ ಕಂಪನಿ ನಿರ್ಮಿಸುತ್ತಿದೆ. ಇದುವರೆಗೂ ಪಿಕ್ಸೆಲ್ ಕಂಪನಿ 9 ಅತ್ಯಾಧುನಿಕ ಉಪಗ್ರಹಗಳ ಉಡಾವಣೆ ಮಾಡಿದೆ. ಇವು ಸಾಮಾನ್ಯ ಉಪಗ್ರಹಗಳಿಗಿಂತ ಭಿನ್ನವಾಗಿ, ಭೂಮಿಯ ಮೇಲಿನ ಅತಿಸೂಕ್ಷ್ಮ ಬದಲಾವಣೆಗಳನ್ನು ಪತ್ತೆ ಹಚ್ಚಬಲ್ಲವು. ರೈತರಿಗೆ ಬೆಳೆಗಳ ಆರೋಗ್ಯ ಪತ್ತೆ, ಪರಿಸರದಲ್ಲಿನ ಮೀಥೇನ್ ಅನಿಲ ಸೋರಿಕೆ ಗುರುತಿಸುವುದು, ಅಕ್ರಮ ಗಣಿಗಾರಿಕೆ ಪತ್ತೆ ಹಚ್ಚುವುದು ಮತ್ತು ಜಲಮಾಲಿನ್ಯದಂತಹ ಸಮಸ್ಯೆಗಳನ್ನು ಮೇಲ್ವಿಚಾರಣೆ ಮಾಡಲು ಈ ಉಪಗ್ರಹಗಳು ನೆರವಾಗುತ್ತವೆ. 2025 ರಲ್ಲಿ ಸಂಸ್ಥೆಯು ತನ್ನ ಆರು ‘ಫೈರ್ ಫ್ಲೈ’ (Firefly) ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.

ಸದ್ಯ ಈ ಕಂಪನಿ ಹೂಡಿಕೆದಾರರಿಂದ 960 ಕೋಟಿ ರೂ. ಹೂಡಿಕೆ ಪಡೆದಿದೆ. ಜಾಗತಿಕ ಮಟ್ಟದಲ್ಲಿ 275ಕ್ಕೂ ಹೆಚ್ಚು ಉದ್ಯೋಗಿಗಳನ್ನು ಪಿಕ್ಸೆಲ್‌ ಸಂಸ್ಥೆ ಹೊಂದಿದೆ. ಇದು ಹೈಪರ್‌ಸ್ಪೆಕ್ಟ್ರಲ್ ಇಮೇಜಿಂಗ್ ಕ್ಷೇತ್ರದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ನಿಧಿ ಪಡೆದ ಕಂಪನಿಗಳಲ್ಲಿ ಒಂದಾಗಿದೆ. 

ಈಗ ಪಿಕ್ಸೆಲ್ ಸಂಸ್ಥೆಯು ನಾಸಾದೊಂದಿಗೆ ಒಪ್ಪಂದ ಮಾಡಿಕೊಂಡ ಮೊದಲ ಭಾರತೀಯ ಖಾಸಗಿ ಬಾಹ್ಯಾಕಾಶ ಸ್ಟಾರ್ಟಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಮೆರಿಕದ ನ್ಯಾಷನಲ್ ರಿಕಾನ್ನೈಸನ್ಸ್ ಆಫೀಸ್ (NRO) ಜೊತೆಗೂ ಐದು ವರ್ಷಗಳ ಒಪ್ಪಂದ ಮಾಡಿಕೊಂಡಿದೆ. ಈ ಸಂಸ್ಥೆಯನ್ನು ಟೈಮ್ (TIME) ನಿಯತಕಾಲಿಕೆಯು 2023ರ ‘100 ಅತ್ಯುತ್ತಮ ಆವಿಷ್ಕಾರಗಳಲ್ಲಿ’ ಒಂದೆಂದು ಗುರುತಿಸಿದೆ ಮತ್ತು ವಿಶ್ವ ಆರ್ಥಿಕ ವೇದಿಕೆಯು (WEF) ‘ಟೆಕ್ನಾಲಜಿ ಪಯೋನೀರ್’ ಎಂದು ಗೌರವಿಸಿದೆ.

ಅವೈಸ್ ಅಹ್ಮದ್ ಯಾರು?

ಅವೈಸ್ ಅಹ್ಮದ್ (Awais Ahmed) ಅವರ ಯಶೋಗಾಥೆ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಇವರು ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟಪ್ ‘ಪಿಕ್ಸೆಲ್’ (Pixxel) ಸಂಸ್ಥೆಯ ಸಹ-ಸ್ಥಾಪಕರು. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನವರು. ಇವರು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಆಲ್ದೂರಿನಲ್ಲೇ ಓದಿದ ಅವೈಸ್, ಚಿಕ್ಕಂದಿನಿಂದಲೂ ದೇಶಕ್ಕಾಗಿ ಏನಾದರೂ ಕೊಡುಗೆ ನೀಡಬೇಕು ಎಂಬ ಕನಸಿನೊಂದಿಗೇ ಮುನ್ನಡೆಯುತ್ತಿದ್ದರು. ಈಗ ತನ್ನ ಬಯಕೆಯಂತೆ ವಿಜ್ಞಾನಿಯಾಗಿ ಜಗತ್ತೇ ಭಾರತದತ್ತ ತಿರುಗಿನೋಡುವಂತೆ ಮಾಡಿದ್ದಾರೆ.  ಅವರ ಯಶೋಗಾಥೆ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. 

ಅವೈಸ್ ಅಹ್ಮದ್ ಅವರು ಐಐಟಿ ಮದ್ರಾಸ್​ನಲ್ಲಿ ಓದಿದವರು. ಸ್ಟಾರ್ಟಪ್​ಗಳಿಗೆ ಅತಿಹೆಚ್ಚು ಉತ್ತೇಜನ ನೀಡುವ ಶಿಕ್ಷಣ ಸಂಸ್ಥೆಗಳಲ್ಲಿ ಇದೂ ಒಂದು. ಇಲ್ಲಿ ಅವೈಸ್ ಅವರು 2019ರಲ್ಲಿ ತಮ್ಮ ಸಹಪಾಠಿ ಕ್ಷಿತಿಜ್ ಖಂಡೇಲ್ವಾಲ್ ಅವರೊಂದಿಗೆ ಸೇರಿ ಪಿಕ್ಸೆಲ್ ಸ್ಟಾರ್ಟಪ್‌ನ್ನು ಆರಂಭಿಸಿದರು. ಪ್ರಾರಂಭದಲ್ಲಿ ತಂದೆಯಿಂದ ಸಾಲ ಪಡೆದು ಕೇವಲ ತಿಂಗಳಿಗೆ ₹10,000 ಖರ್ಚಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಇಡೀ ಜಗತ್ತೇ ತನ್ನನ್ನು ಗುರುತಿಸುವಂತೆ ಅವರು ಮಾಡಿದ್ದಾರೆ.