20 ರೂ ಕಚೋರಿ ತಿನ್ನಲು ಹೋಗಿ 20 ಲಕ್ಷ ಕಳೆದುಕೊಂಡ ವ್ಯಕ್ತಿ

ಜೈಪುರ: 20 ರೂ. ಕಚೋರಿ ತಿನ್ನಲು ಹೋದ ಉದ್ಯಮಿಯೊಬ್ಬರು ಬರೋಬ್ಬರಿ 20 ಲಕ್ಷ ರೂ ನಗದನ್ನು ಕಳೆದುಕೊಂಡ ಆಘಾತಕಾರಿ ಘಟನೆಯೊಂದು ರಾಜಸ್ಥಾನ ಜೈಪುರದಲ್ಲಿ ನಡೆದಿದೆ.
Sponsoredಈ ಘಟನೆ ಸೋಮವಾರ ನಹರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.
ಉದ್ಯಮಿ ಚಂಪಾಲಾಲ್ ತಮ್ಮ ಬ್ಯಾಗ್‌ನಲ್ಲಿ 20 ಲಕ್ಷ ರೂ ನಗದು ಹಣವನ್ನು ತಗೊಂಡು ಸ್ಕೂಟರ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ದಾರಿಮಧ್ಯೆ ನಾಲ್ಕು ಗಂಟೆಯ ಸುಮಾರಿಗೆ ಇವರಿಗೆ ರಸ್ತೆ ಬದಿಯ ಕಚೋರಿ ತಿನ್ನುವ ಆಸೆಯಾಗಿದೆ. ಹಾಗಾಗಿ ಸ್ಕೂಟರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ನಗದು ತುಂಬಿದ್ದ ಬ್ಯಾಗನ್ನು ಸ್ಕೂಟರ್‌ನ ಮುಂಭಾಗದ ಜಾಗದಲ್ಲಿ ಇಟ್ಟು ಕಚೋರಿ ತಿನ್ನುತ್ತಿದ್ದರು. ಆಗ ಅಲ್ಲೇ ಕುಳಿತಿದ್ದ ಇಬ್ಬರು ದುಷ್ಕರ್ಮಿಗಳು ಮಿಂಚಿನ ವೇಗದಲ್ಲಿ ಬಂದು ಸ್ಕೂಟಿಯಲ್ಲಿದ್ದ ಬ್ಯಾಗ್ ಎಗರಿಸಿ ಎಸ್ಕೇಪ್ ಆಗಿದ್ದಾರೆ.
ಇಬ್ಬರು ಆರೋಪಿಗಳ ಗುರುತು ಪತ್ತೆಹಚ್ಚಲು ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಚಂಪಾಲಾಲ್ ನೀಡಿದ ದೂರಿನ ಮೇರೆಗೆ ನಹರ್‌ಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ.




