ಉಡುಪಿ ಜಿಲ್ಲೆಯ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ 169 A (NH 169A) ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಭಾರೀ ದೊಡ್ಡ ಕೊಡುಗೆ ಸಿಕ್ಕಿದೆ.
ಹೌದು, ಆಗುಂಬೆ ಘಾಟಿಯಿಂದ ಕರಾವಳಿ ಜಂಕ್ಷನ್ವರೆಗಿನ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕೇಂದ್ರ ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಒಟ್ಟು ₹42.75 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿದೆ. ಒಟ್ಟಿನಲ್ಲಿ ಈ ಯೋಜನೆಯು ಕರಾವಳಿ ಹಾಗೂ ಮಲೆನಾಡು ಭಾಗದ ವಾಹನ ಸವಾರರ ದೀರ್ಘಕಾಲದ ಸಂಚಾರ ಸಮಸ್ಯೆಗೆ ಮುಕ್ತಿ ನೀಡುತ್ತದೆ.
ಎಲ್ಲೆಲ್ಲಾ ಅಭಿವೃದ್ಧಿ?
ಬಿಡುಗಡೆಯಾಗಿರುವ ಅನುದಾನದಲ್ಲಿ ರಾಷ್ಟ್ರೀಯ ಹೆದ್ದಾರಿ 169 A ವ್ಯಾಪ್ತಿಯ ಆಗುಂಬೆ ಘಾಟಿಯ ಆಯ್ದ ಅಪಾಯಕಾರಿ ಭಾಗಗಳಲ್ಲಿ ತಡೆಗೋಡೆ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣ ಕೈಗೆತ್ತಿಕೊಳ್ಳಲಾಗುತ್ತದೆ. ಜೊತೆಗೆ, ಆಗುಂಬೆಯಿಂದ ಹೆಬ್ರಿ ಪೇಟೆಯವರೆಗಿನ ರಸ್ತೆಯ ಸಮಗ್ರ ಅಭಿವೃದ್ಧಿ ಕಾಮಗಾರಿಗಳು ಈ ಯೋಜನೆಯಡಿಯಲ್ಲಿ ನೆರವೇರಲಿವೆ.
ಅಲ್ಲದೆ ಉಡುಪಿ ನಗರದ ಸಾಗಾಣಿಕೆಗೆ ಪ್ರಮುಖವಾಗಿರುವ ಪರ್ಕಳದಿಂದ ಕರಾವಳಿ ಜಂಕ್ಷನ್ವರೆಗಿನ ಆಯ್ದ ಸಂಚಾರ ದಟ್ಟಣೆ ಪ್ರದೇಶಗಳಲ್ಲಿ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣ/ಕಾಂಕ್ರೀಟಿಕರಣ ಕಾಮಗಾರಿಗಳನ್ನು ನಡೆಸಲಾಗುತ್ತದೆ. ಘಾಟಿ ಪ್ರದೇಶದಲ್ಲಿ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಕಾಂಕ್ರೀಟ್ ತಡೆಗೋಡೆಗಳು ಅತ್ಯಗತ್ಯವಾಗಿದ್ದವು. ಈ ಅನುದಾನ ಬಿಡುಗಡೆಯಿಂದಾಗಿ ಮಳೆಗಾಲದಲ್ಲಿ ಕುಸಿಯುವ ಭೀತಿಯಲ್ಲಿದ್ದ ರಸ್ತೆಗಳಿಗೆ ಶಾಶ್ವತ ಪರಿಹಾರ ಸಿಗಲಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.

