ಮಾಫಿಯಾ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರು ನಿವೃತ್ತ ಸರ್ಕಾರಿ ಬಸ್ ಚಾಲಕನ (ಪ್ರಸ್ತುತ ಕಲ್ಲು ವ್ಯಾಪಾರಿ) ಮನೆ ಮೇಲೆ ದಾಳಿ ನಡೆಸಿದ ವೇಳೆ ಭಾರೀ ಸಂಪತ್ತನ್ನ ಕಂಡು ಬೆಚ್ಚಿಬಿದ್ದಿರುವ ಘಟನೆ ಪಶ್ಚಿಮ ಬಂಗಾಳದ ಬಿರ್ಭಮ್ನಲ್ಲಿ ನಡೆದಿದೆ.
Sponsoredಮಂಗಳವಾರ ತಡರಾತ್ರಿ ಆರಂಭವಾದ ಈ ಜಂಟಿ ಪೊಲೀಸ್ ಕಾರ್ಯಾಚರಣೆಯು ಬುಧವಾರ ಸಂಜೆಯವರೆಗೂ ಮುಂದುವರಿದಿದ್ದು, ಜಪ್ತಿ ಮಾಡಿದ ಹಣವನ್ನು ಎಣಿಸಲು ಬರೋಬ್ಬರಿ ಐದು ಎಣಿಕೆ ಯಂತ್ರಗಳನ್ನು ಬಳಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ದಾಳಿಯ ವೇಳೆ 15 ಕೆಜಿ ತೂಕದ ಚಿನ್ನದ ಬಿಸ್ಕತ್ಗಳು ಹಾಗೂ ಸುಮಾರು 20 ಕೋಟಿ ರೂಪಾಯಿಗೂ ಅಧಿಕ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಯಾರೀ ಮಿನಾರ್ ಮೊಂಡಲ್?
ದಾಳಿಗೊಳಗಾದ ಮನೆಯು ಮಿನಾರ್ ಮೊಂಡಲ್ ಎಂಬುವವರಿಗೆ ಸೇರಿದ್ದಾಗಿದೆ. ಇವರು ಈ ಹಿಂದೆ ಸರ್ಕಾರಿ ಸಾರಿಗೆ ಸಂಸ್ಥೆಯಲ್ಲಿ ಬಸ್ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಅವರು ಈ ಭಾಗದ ಪ್ರಮುಖ ಕಲ್ಲು ಮತ್ತು ಮರಳು ಉದ್ಯಮಿಯಾದ ಟುಲು ಮೊಂಡಲ್ (ಅಲಿಯಾಸ್ ಮೊಹಮ್ಮದ್ ನಜಿಬುದ್ದೀನ್) ಅವರ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಟುಲು ಮೊಂಡಲ್ ಅವರ ಕಲ್ಲು ಕ್ವಾರಿಗಳು ಮತ್ತು ಸಾರಿಗೆ ವ್ಯವಹಾರದ ಕಂದಾಯ ಸಂಗ್ರಹದ ಜವಾಬ್ದಾರಿಯನ್ನು ಮಿನಾರ್ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ಟುಲು ಮೊಂಡಲ್, ಈ ಹಿಂದೆ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಪ್ರಭಾವಿ ನಾಯಕ ಅನುಬ್ರತಾ ಮೊಂಡಲ್ ಅವರ ಅತ್ಯಂತ ಆಪ್ತನಾಗಿದ್ದರು. ಅನುಬ್ರತಾ ಮೊಂಡಲ್ ಇತ್ತೀಚೆಗಷ್ಟೇ ರೀತಾಬ್ರತಾ ಬ್ಯಾನರ್ಜಿ ನೇತೃತ್ವದ ಬಂಡಾಯ ಟಿಎಂಸಿ ಬಣವನ್ನು ಸೇರಿಕೊಂಡಿದ್ದರು.
ಇನ್ನೂ ಮರಳು ಮಾಫಿಯಾ ವಿರುದ್ಧದ ಅಧಿಕಾರಿಗಳು ಕೈಗೊಂಡ ಕಾರ್ಯಾಚರಣೆ ಹಾಗೂ ಕಾನೂನು ಕ್ರಮವನ್ನ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಶ್ಲಾಘಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಿಎಂ, ʻಮರಳು ಮಾಫಿಯಾ ವಿರುದ್ಧದ ಕಾರ್ಯಾಚರಣೆಗಾಗಿ ನಮ್ಮ ಕಾನೂನು ಸಿಬ್ಬಂದಿಯ ಕೆಲಸ ಶ್ಲಾಘನೀಯ. ನಿಖರ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಪಶ್ಚಿಮ ಬಂಗಾಳ ಪೊಲೀಸರು, ಡಿಜಿಪಿ, ಎಸ್ಪಿ ಬಿರ್ಭಮ್ ಪೊಲೀಸ್ ಮತ್ತು ಬಿರ್ಭಮ್ ಜಿಲ್ಲಾ ಪೊಲೀಸ್ ಸಿಬ್ಬಂದಿ ಅವರ ತ್ವರಿತ, ವೃತ್ತಿಪರ ಮತ್ತು ನಿರ್ಣಾಯಕ ಕ್ರಮಕ್ಕಾಗಿ ನಾನು ಅವರನ್ನ ಪ್ರಶಂಸಿಸುತ್ತೇನೆ ಎಂದಿದ್ದಾರೆ.




