ಸೋಮವಾರ, 26 ಅಕ್ಟೋಬರ್ 2026
Trending

Lakkundi : ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನ ಮೌಲ್ಯ 10 ಪಟ್ಟು ಹೆಚ್ಚು – ನಿಧಿ ಹುಡುಕಿ ಕೊಟ್ಟ ರಿಕ್ತಿ ಕುಟುಂಬದಿಂದ ಹೊಸ ಬೇಡಿಕೆ

Lakkundi: : ಮನೆ ಕಟ್ಟಲು ಅಡಿಪಾಯ ತೆಗೆಯುವ ಸಂದರ್ಭದಲ್ಲಿ ಕೆಳಗಡೆ ಚಿನ್ನದ ನಿಧಿ ಪತ್ತೆಯಾಗಿರುವಂತಹ ಅಪರೂಪದ ಘಟನೆಯೊಂದು ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆದಿತ್ತು. ಬಳಿಕ ಮನೆಯವರು ಸ್ವ ಇಚ್ಛೆಯಿಂದ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದರು. ಇದೀಗ ಕುಟುಂಬ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿ ತಮ್ಮ ಪ್ರಾಮಾಣಿಕತೆಯನ್ನು ಮೆರೆದಿತ್ತು. ಇದೀಗ ಈ ಚಿನ್ನ ವಿಜಯನಗರ ಕಾಲದ್ದು ಹಾಗೂ ಇಂದು ಇದರ ಬೆಲೆ 10ಪಟ್ಟು ಹೆಚ್ಚು ಎಂಬುದು ತಿಳಿದು ಬಂದಿದೆ. ಈ ಬೆನ್ನಲ್ಲೇ ನಿಧಿ ಹುಡುಕಿ ಕೊಟ್ಟ ಪ್ರಜ್ವಲ್ ರಿತ್ತಿ‌ ಕುಟುಂಬ ಹೊಸ ಬೇಡಿಕೆ ಮುಂದಿಟ್ಟಿದ್ದು, 8 ಕೋಟಿ ಮೊತ್ತಕ್ಕೆ ಐದರಲ್ಲಿ ಒಂದು  ಪಾಲು ತಮಗೆ ಬೇಕು ಎಂದಿದೆ.

Sponsored

ಲಕ್ಕುಂಡಿಯಲ್ಲಿ ನಿಧಿ ಸಿಕ್ಕಾಗ ನಿಧಿಯ ಕಾಲಮಾನ ಯಾವುದು ಮತ್ತು ಮೌಲ್ಯಮಾಪನ ಮಾಡುವುದಕ್ಕಾಗಿ ಸರ್ಕಾರವು ಇತಿಹಾಸ ತಜ್ಞರಾದ ಡಾ. ಎಂ.ಎಸ್. ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ 6 ಜನ ಸದಸ್ಯರ ತಂಡವನ್ನು ರಚನೆ ಮಾಡಲಾಗಿತ್ತು. ತಂಡವು ಪರಿಶೀಲನೆ ನಡೆಸಿದ್ದು, ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಇನ್ನು ಈ ಆಭರಣಗಳಲ್ಲಿ ನೀಲಮಣಿ, ಪಚ್ಚೆ ಹಾಗೂ ಹವಳದಂತಹ ಅಮೂಲ್ಯ ಹರಳುಗಳನ್ನು ಅಳವಡಿಸಲಾಗಿದೆ. ಅವುಗಳ ಕಲಾತ್ಮಕತೆ ವಿಶೇಷವಾಗಿದ್ದು, ಪತ್ತೆಯಾದ ಚಿನ್ನದ ತೂಕ ಸುಮಾರು 470 ಗ್ರಾಂ ಇದೆ. ಇಂದಿನ ಮಾರುಕಟ್ಟೆಯ ಬೆಲೆಗೆ ಹೋಲಿಕೆ ಮಾಡಿದರೆ 80 ಲಕ್ಷ ರೂಪಾಯಿಗೂ ಹೆಚ್ಚು ಎಂದು ತಜ್ಞರ ಸಮಿತಿ ಹೇಳಿದೆ. ಇನ್ನೂ ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನವು ಸಾಮಾನ್ಯ ಚಿನ್ನವಲ್ಲ ಎಂದು ಹೇಳಲಾಗಿದೆ. ಪುರಾತನ ಕಾಲದ ಐತಿಹಾಸಿಕ ಆಭರಣಗಳಾಗಿದ್ದು, ಇದರ ಮೌಲ್ಯವು ಕನಿಷ್ಠ 10 ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಈಗ ಈ ಮಾಹಿತಿ ತಿಳಿಯುತ್ತಿದ್ದಂತೆ, ರಿಕ್ತಿ ಕುಟುಂಬ ಸಿಕ್ಕ ನಿಧಿಯನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ್ದೇವೆ. ಹೀಗಾಗಿ ತಜ್ಞರು ಹೇಳಿರುವ ಸಿಕ್ಕ ಬಂಗಾರದ ಆ್ಯಂಟಿಕ್​​ ಮೌಲ್ಯದಲ್ಲಿ ತಮಗೆ ಐದರಲ್ಲಿ ಒಂದು ಭಾಗ ಪಾಲು ನೀಡಬೇಕು. ಸರ್ಕಾರ ಕೂಡ ನಮಗೆ ಪ್ರಾಮಾಣಿಕವಾಗಿ ಪರಿಹಾರ ನೀಡಬೇಕು. ಈಗಿನ ಬೆಲೆಯನ್ನು ಕೊಡುತ್ತೇವೆ ಎಂದರೆ ನಾವು ಅದನ್ನು ಒಪ್ಪಲ್ಲ. ಸಚಿವ ಎಚ್. ಕೆ. ಪಾಟೀಲ್, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ರಾಜ್ಯ ಸಲಹಾ ಸಮಿತಿ ಸದಸ್ಯ ಸಿದ್ದು ಪಾಟೀಲ್ ನಮಗೆ ಭರವಸೆ ನೀಡಿದ್ದರು. ಹೀಗಾಗಿ ಅವರ ಮೇಲೆ ನಮಗೆ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.