ಶಬರಿಮಲೆ ಯಾತ್ರೆ 2026: ಅ.29 ರಿಂದ ವರ್ಚುವಲ್ ಕ್ಯೂ ಬುಕಿಂಗ್ ಆರಂಭ
ಕೇರಳದ ಪ್ರಸಿದ್ಧ ಶಬರಿಮಲೆ ಶ್ರೀ ಧರ್ಮಶಾಸ್ತಾ (ಅಯ್ಯಪ್ಪ ಸ್ವಾಮಿ) ದೇಗುಲದ ಮಂಡಲ ಹಾಗೂ ಮಕರವಿಳಕ್ಕು ಯಾತ್ರೆಗೆ ಸಂಬಂಧಿಸಿದಂತೆ ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ಮಹತ್ವದ ಪ್ರಕಟಣೆ ಹೊರಡಿಸಿದೆ.
Sponsored2026ನೇ ಸಾಲಿನ ಮಂಡಲ ಪೂಜೆಗಾಗಿ ನಡೆಯುವ ಆನ್ಲೈನ್ ವರ್ಚುವಲ್ ಕ್ಯೂ ಬುಕಿಂಗ್ ಅಕ್ಟೋಬರ್ 29 ರಂದು ಬೆಳಿಗ್ಗೆ 10:00 ಗಂಟೆಗೆ ಅಧಿಕೃತವಾಗಿ ಪ್ರಾರಂಭವಾಗಲಿದೆ. ಭಕ್ತರು ಅಧಿಕೃತ ವೆಬ್ಸೈಟ್ sabarimalaonline.org ಮೂಲಕ ತಮ್ಮ ದರ್ಶನದ ಸ್ಲಾಟ್ಗಳನ್ನು ಕಾಯ್ದಿರಿಸಿಕೊಳ್ಳಬಹುದು.
ದೈನಂದಿನ ಭಕ್ತರ ಮಿತಿ ಮತ್ತು ನಿಯಮಗಳು:
ಈ ವರ್ಷ ಮುನ್ನೆಚ್ಚರಿಕೆ ಕ್ರಮವಾಗಿ ಮತ್ತು ಭಕ್ತರ ಸುರಕ್ಷತೆಗಾಗಿ ಒಟ್ಟು ಪ್ರತಿದಿನ 80,000 ಯಾತ್ರಾರ್ಥಿಗಳಿಗೆ (ಆನ್ಲೈನ್ ಮತ್ತು ಸ್ಪಾಟ್ ಬುಕಿಂಗ್ ಸೇರಿ) ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ನೀಲಕ್ಕಲ್ ಮತ್ತು ಪಂಬಾ ಮಾರ್ಗದ ಮೂಲಕ ದಿನಕ್ಕೆ 60,000 ಜನರಿಗೆ ಆನ್ಲೈನ್ ಬುಕಿಂಗ್ ಅವಕಾಶ ನೀಡಲಾಗಿದೆ. ಉಳಿದಂತೆ ಎರುಮೇಲಿ ಮತ್ತು ವಂಡಿಪೆರಿಯಾರ್ ಕಾಲ್ನಡಿಗೆ ಮಾರ್ಗಗಳಿಗೂ ಪ್ರತ್ಯೇಕ ಕೋಟಾ ನಿಗದಿಪಡಿಸಲಾಗಿದೆ.
ಉಚಿತ ಬುಕಿಂಗ್: ವರ್ಚುವಲ್ ಕ್ಯೂ ಮೂಲಕ ದರ್ಶನ ಪಡೆಯಲು ಯಾವುದೇ ಶುಲ್ಕವಿರುವುದಿಲ್ಲ ( ಸಂಪೂರ್ಣ ಉಚಿತ). ಆದರೆ ಯಾತ್ರಾರ್ಥಿಗಳು ದೇವಸ್ವಂ ಬೋರ್ಡ್ನ ಪ್ಲಿಗ್ರಿಮ್ ರಿಲೀಫ್ ಫಂಡ್ ಅಥವಾ ಸ್ವಚ್ಛತಾ ನಿಧಿಗೆ ಸ್ವಯಂಪ್ರೇರಿತವಾಗಿ ದೇಣಿಗೆ ನೀಡಲು ಅವಕಾಶವಿದೆ.
ಬುಕಿಂಗ್ ಮಾಡುವಾಗ ಭಕ್ತರು ತಮ್ಮ ಆಧಾರ್ ಕಾರ್ಡ್ ಅಥವಾ ಇತರೆ ಮಾನ್ಯತೆ ಪಡೆದ ಗುರುತಿನ ಚೀಟಿ ಮತ್ತು ಇತ್ತೀಚಿನ ಫೋಟೋವನ್ನು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು. ದರ್ಶನಕ್ಕೆ ಬರುವಾಗ ಅದೇ ಮೂಲ ದಾಖಲೆಯನ್ನು ಜೊತೆಯಲ್ಲಿಟ್ಟುಕೊಳ್ಳುವುದು ಕಡ್ಡಾಯ.
ಹೈಕೋರ್ಟ್ ನಿರ್ದೇಶನದಂತೆ ಪಂಬಾದಲ್ಲಿನ ಸ್ಪಾಟ್ ಬುಕಿಂಗ್ ಅನ್ನು ನಿಯಂತ್ರಿಸಲಾಗಿದ್ದು, ನೀಲಕ್ಕಲ್ ಹಾಗೂ ಇತರೆ ನಿರ್ದಿಷ್ಟ ಕೇಂದ್ರಗಳಲ್ಲಿ ಮಾತ್ರ ಅತ್ಯಂತ ಮಿತವಾದ ಸ್ಪಾಟ್ ಬುಕಿಂಗ್ ಸೌಲಭ್ಯವಿರುತ್ತದೆ. ಆದ್ದರಿಂದ ಯಾತ್ರೆಗೆ ತೆರಳುವ ಮುನ್ನ ಕಡ್ಡಾಯವಾಗಿ ಆನ್ಲೈನ್ ಮೂಲಕವೇ ಸ್ಲಾಟ್ ಮುಂಗಡವಾಗಿ ಬುಕ್ ಮಾಡಿಕೊಳ್ಳಲು ಸೂಚಿಸಲಾಗಿದೆ.




