ರೈಲಿನ ಬೋಗಿಗಳಲ್ಲಿ ರಾತ್ರಿ ಸಮಯ ಮೊಬೈಲ್, ಪವರ್‌ಬ್ಯಾಂಕ್ ಚಾರ್ಜ್‌ಗೆ ನಿರ್ಬಂಧ
ರೈಲ್ವೆ ಇಲಾಖೆಯು ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ರಾತ್ರಿ ವೇಳೆ ರೈಲುಗಳಲ್ಲಿ ಮೊಬೈಲ್ ಮತ್ತು ಲ್ಯಾಪ್‌ಟಾಪ್ ಚಾರ್ಜಿಂಗ್‌ಗೆ ಸಂಬಂಧಿಸಿದಂತೆ ಪ್ರಮುಖ ಆದೇಶವನ್ನು ಜಾರಿಗೊಳಿಸಿದೆ:
ರೈಲುಗಳಲ್ಲಿ ರಾತ್ರಿ 11:00 ಗಂಟೆಯಿಂದ ಬೆಳಿಗ್ಗೆ 5:00 ಗಂಟೆಯವರೆಗೆ ಚಾರ್ಜಿಂಗ್ ಪಾಯಿಂಟ್‌ಗಳ ವಿದ್ಯುತ್ ಸರಬರಾಜನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ. ಈ ಸಮಯದಲ್ಲಿ ಪ್ರಯಾಣಿಕರು ತಮ್ಮ ಮೊಬೈಲ್ ಅಥವಾ ಇಲೆಕ್ಟ್ರಾನಿಕ್ ಸಾಧನಗಳನ್ನು ಚಾರ್ಜ್ ಮಾಡಲು ಅವಕಾಶವಿರುವುದಿಲ್ಲ.
ಇತ್ತೀಚೆಗೆ ಸೌತ್ ಈಸ್ಟ್ ರೈಲ್ವೆ ವಲಯದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದೊಬ್ಬರ ಪವರ್ ಬ್ಯಾಂಕ್ ಚಾರ್ಜ್‌ನಲ್ಲಿರುವಾಗ ಸ್ಫೋಟಗೊಂಡು ಬೋಗಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಹೊಗೆ ಆವರಿಸಿಕೊಂಡ ಘಟನೆ ನಡೆದಿತ್ತು.
ರಾತ್ರಿ ವೇಳೆ ಪ್ರಯಾಣಿಕರೆಲ್ಲರೂ ಗಾಢ ನಿದ್ದೆಯಲ್ಲಿರುವಾಗ ಚಾರ್ಜ್‌ಗೆ ಹಾಕಿರುವ ಮೊಬೈಲ್, ಲ್ಯಾಪ್‌ಟಾಪ್ ಅಥವಾ ಪವರ್ ಬ್ಯಾಂಕ್‌ಗಳು ಅತಿ ಹೆಚ್ಚು ಬಿಸಿಯಾದರೆ ಶಾರ್ಟ್ ಸರ್ಕ್ಯೂಟ್ ಅಥವಾ ಅಗ್ನಿ ಅವಘಡಗಳು ಸಂಭವಿಸುವ ದೊಡ್ಡ ಅಪಾಯವಿರುತ್ತದೆ. ಇದನ್ನು ತಡೆಯಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
Sponsoredರೈಲಿನಲ್ಲಿರುವ ಆನ್-ಬೋರ್ಡ್ ಸಿಬ್ಬಂದಿ ರಾತ್ರಿ 11:00 ಗಂಟೆಗೆ ತಪ್ಪದೆ ಎಲ್ಲಾ ಚಾರ್ಜಿಂಗ್ ಸಾಕೆಟ್‌ಗಳ ಸ್ವಿಚ್‌ಗಳನ್ನು ಆಫ್ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ರೈಲ್ವೆ ಮಂಡಳಿ ಎಲ್ಲಾ ವಲಯಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.




