ಸೋಮವಾರ, 26 ಅಕ್ಟೋಬರ್ 2026
Trending

Hassan : ಪ್ರಜ್ವಲ್ ರೇವಣ್ಣ ಪ್ರಕರಣ – BJP ಮುಖಂಡ ಸೇರಿ 39 ಮಂದಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

Hassan : ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ಲೀಲ ವಿಡಿಯೋ ಹಂಚಿಕೆ ಮಾಡಿದ 39 ಮಂದಿಯ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ. ಇದರಲ್ಲಿ ಪ್ರಜ್ವಲ್ ರೇವಣ್ಣ ಆಪ್ತರೂ ಸೇರಿದಂತೆ ಬಿಜೆಪಿ ಮುಖಂಡರು ಕೂಡ ಇದ್ದಾರೆ. 

Sponsored

ಯಸ್, 2024 ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಂದಿನ ಹಾಸನ ಸಂಸದರಾಗಿದ್ದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೋಗಳು ವೈರಲ್‌ ಆಗಿದ್ದವು. ಇದಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ ಚುನಾವಣಾ ಏಜೆಂಟ್‌, ವಕೀಲ ಪೂರ್ಣ ಚಂದ್ರ ಅವರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆ ರಾಜ್ಯ ಸರ್ಕಾರವು ಈ ಸಂಬಂಧ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಗೆ ಸೂಚಿಸಿತ್ತು. 23 ತಿಂಗಳ ತನಿಖೆಯ ಬಳಿಕ ಎಸ್‌ಐಟಿಯು ಹಾಸನದ ಸಿವಿಲ್‌ ನ್ಯಾಯಾಲಯಕ್ಕೆ ಚಾರ್ಚ್‌ಶೀಟ್‌ ಸಲ್ಲಿಕೆ ಮಾಡಿದೆ. ಬರೋಬ್ಬರಿ 13 ಸಾವಿರಕ್ಕೂ ಅಧಿಕ ಪುಟಗಳಿದ್ದು, ಬಿಜೆಪಿ ಮುಖಂಡ ದೇವರಾಜೇಗೌಡ ಸೇರಿ 39 ಮಂದಿಯ ವಿರುದ್ಧ ಆರೋಪ ದೃಢಪಡಿಸಿ ಸಾಕ್ಷಿ ಒದಗಿಸಲಾಗಿದೆ.

ಈ ಪ್ರಕರಣದಲ್ಲಿ ಒಟ್ಟು 52 ವ್ಯಕ್ತಿಗಳ ಹೆಸರನ್ನು ಎಸ್‌ಐಟಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ. ಇವರಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪೆನ್‌ಡ್ರೈವ್ ಹಂಚಿಕೆಯಲ್ಲಿ ಭಾಗಿಯಾದವರ ವಿವರಗಳಿವೆ. ಉಲ್ಲೇಖಿಸಲಾದ 52 ಜನರಲ್ಲಿ 39 ಮಂದಿಯ ವಿರುದ್ಧ ಅಶ್ಲೀಲ ವೀಡಿಯೊಗಳನ್ನು ಹರಡಿದ ಮತ್ತು ಕಾನೂನು ಉಲ್ಲಂಘಿಸಿದ ಗಂಭೀರ ಆರೋಪಗಳು ಸಾಬೀತಾಗಿವೆ. ಲೋಕಸಭೆ ಚುನಾವಣೆ (Lok Sabha Election) ವೇಳೆ 70 ಪೆನ್‌ಡ್ರೈವ್‌ (Pendrive) ಖರೀದಿಸಿ ವಿಡಿಯೋ ವೈರಲ್ (Video Viral) ಮಾಡಿದ್ದು ತನಿಖೆ ವೇಳೆ ಬಯಲಾಗಿದೆ ಎಂದು ಎಸ್‌ಐಟಿ ಸ್ಪಷ್ಟಪಡಿಸಿದೆ. 

ಈ ಬೃಹತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಒಟ್ಟು 277 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿದೆ. ತಾಂತ್ರಿಕ ಪುರಾವೆಗಳು ಮತ್ತು ಫೋರೆನ್ಸಿಕ್ ಸೈನ್ಸ್ ಲ್ಯಾಬ್ (FSL) ವರದಿಗಳ ಆಧಾರದ ಮೇಲೆ ದೋಷಾರೋಪ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಪ್ರಕರಣದಲ್ಲಿ ಒಟ್ಟು 39 ಜನರ ವಿರುದ್ಧ ದೋಷಾರೋಪ ಹೊರಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ನವೀನ್, ಕಾರ್ತಿಕ್ (ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ), ಚೇತನ್, ಲಿಖಿತ್ ಗೌಡ ಸೇರಿ ಪ್ರಮುಖರಿದ್ದಾರೆ.