ಶನಿವಾರ, 24 ಅಕ್ಟೋಬರ್ 2026

ಇಬ್ಬರು ಹೆಂಡತಿಯರಿಗೆ ಒಬ್ಬನೇ ಗಂಡ – ಊರಿನ ಪಂಚಾಯ್ತಿಯವರು ಕೊಟ್ಟ ತೀರ್ಪು ಕೇಳಿದ್ರೆ ಶಾಕ್ ಆಗುತ್ತೆ

ಗ್ರಾಮದ ಮರ್ಯಾದೆಯನ್ನು ಕಾಪಾಡುವ ಸಲುವಾಗಿ, ಗ್ರಾಮದಲ್ಲಿ ಪೊಲೀಸರು ಎಂಟ್ರಿ ಕೊಡಬಾರದು ಎನ್ನುವ ಕಾರಣಕ್ಕೆ ಹೀಗೆ ಯಾವ್ಯಾವುದೋ ಕಾರಣಕ್ಕೆ ಪಂಚಾಯಿತಿಗಳಲ್ಲಿ ತೀರ್ಮಾನ ಆಗುವುದು ಇದೆ. ಅಂಥದ್ದೇ ಒಂದು ತೀರ್ಪು ಈಗ ದೇಶದ ಗಮನ ಸೆಳೆದಿದೆ. ವಿಚಿತ್ರ ಆದರೂ ಸತ್ಯ ಎನ್ನುವ ತೀರ್ಪು ಇದಾಗಿದ್ದು, ಜನರು ಕಣ್​ಕಣ್​ ಬಿಡುವಂತಾಗಿದೆ. 

ಹೌದು, ಜಾರ್ಖಾಂಡ್ ನ ರಾಮ್‌ಪುರ ಜಿಲ್ಲೆಯ ತಾಂಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಂತ ವಿಚಿತ್ರ ಹಾಗೂ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದೆ. ಕುಟುಂಬದ ಆಂತರಿಕ ಕಲಹವನ್ನು ಬಗೆಹರಿಸಲು ಸಭೆ ಸೇರಿದ ಪಂಚಾಯಿತಿಯೊಂದು, ಇಬ್ಬರು ಪತ್ನಿಯರನ್ನು ಹೊಂದಿರುವ ವ್ಯಕ್ತಿಯನ್ನು ವಾರದ ತಲಾ ಮೂರು ದಿನಗಳಂತೆ ಹಂಚಿಕೆ ಮಾಡಿ ಆದೇಶ ಹೊರಡಿಸುವ ಮೂಲಕ ವಿನೂತನ ಮಧ್ಯಸ್ಥಿಕೆ ವಹಿಸಿದೆ.

ಏನಿದು ಕೇಸ್?

ದಢಿಯಾಲ್ ನಗರ ಪಂಚಾಯಿತಿ ನಿವಾಸಿ ನಜಾಖತ್ ಎಂಬಾತನಿಗೆ 14 ವರ್ಷಗಳ ಹಿಂದೆ ಉತ್ತರಾಖಂಡ ಮೂಲದ ಆಶ್ರಾ ಎಂಬವರ ಜೊತೆ ವಿವಾಹವಾಗಿತ್ತು. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಆದರೆ, ಕುಟುಂಬಕ್ಕೆ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ನಜಾಖತ್, ಸುಮಾರು ನಾಲ್ಕು ವರ್ಷಗಳ ಹಿಂದೆ ನೇಹಾ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದನು. ವಿಶೇಷವೆಂದರೆ, ಎರಡನೇ ಪತ್ನಿ ನೇಹಾಗೂ ಸಹ ಇಬ್ಬರು ಹೆಣ್ಣುಮಕ್ಕಳೇ ಜನಿಸಿದ್ದರು.

ಎರಡನೇ ಮದುವೆಯ ನಂತರ ನಜಾಖತ್ ಸಂಪೂರ್ಣವಾಗಿ ಮೊದಲ ಪತ್ನಿಯನ್ನು ನಿರ್ಲಕ್ಷಿಸಲು ಪ್ರಾರಂಭಿಸಿದನು. ಆತ ಎರಡನೇ ಪತ್ನಿ ನೇಹಾ ಜೊತೆಯೇ ವಾಸಿಸುತ್ತಿದ್ದು, ಮೊದಲನೇ ಪತ್ನಿ ಆಶ್ರಾ ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳ ದಿನನಿತ್ಯದ ನಿರ್ವಹಣೆಗೆ ಹಾಗೂ ಜೀವನೋಪಾಯಕ್ಕೆ ಯಾವುದೇ ಹಣವನ್ನು ನೀಡುತ್ತಿರಲಿಲ್ಲ. ಪತಿಯ ಈ ನಡವಳಿಕೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ ಆಶ್ರಾ, ಕೊನೆಗೆ ಸೋಮವಾರ ಸ್ಥಳೀಯ ಪೊಲೀಸ್ ಚೌಕಿಗೆ ತೆರಳಿ ಜೀವನಾಂಶ ಕೋರಿ ದೂರು ದಾಖಲಿಸಿದ್ದರು. ನಂತರ ಈ ಕೇಸ್​ ಅಲ್ಲಿಯ ಪಂಚಾಯಿತಿ ಮೆಟ್ಟಿಲೇರಿತು.

ಬಳಿಕ ಗ್ರಾಮದಲ್ಲಿ ಗ್ರಾಮಸ್ಥರು ಪಂಚಾಯತ್ ಸಭೆ ಕರೆಯಲಾಗಿತ್ತು. ನಾಲ್ಕು ಗಂಟೆಗಳ ಕಾಲ ನಡೆದ ಪಂಚಾಯತ್ ನಂತರ, ಮಧ್ಯಸ್ಥಗಾರರು ತಮ್ಮ ನಿರ್ಧಾರವನ್ನು ಘೋಷಿಸಿದರು. ಇಬ್ಬರು ಮಹಿಳೆಯರಿಗೂ ಅನ್ಯಾಯ ಆಗಬಾರದು ಎನ್ನುವುದು ಪಂಚಾಯಿತಿಯ ತೀರ್ಪು. ಈ ಹಿನ್ನೆಲೆಯಲ್ಲಿ, ಪತಿ ಮಹಾಶಯ, ಪ್ರತಿ ವಾರ ಮೂರು ದಿನಗಳ ಕಾಲ ಎರಡೂ ಹೆಂಡತಿಯರೊಂದಿಗೆ ವಾಸಿಸಬೇಕಾಗುತ್ತದೆ ಎಂದು ಪಂಚಾಯತ್ ಹೇಳಿದೆ. ವಾರದ ಒಂದು ದಿನ ಗಂಡನ ಇಚ್ಛೆಯನ್ನು ಅವಲಂಬಿಸಿರುತ್ತದೆ. ಇದಲ್ಲದೆ, ಅವನು ತನ್ನ ಮೊದಲ ಹೆಂಡತಿಯ ಮನೆಗೆ ಒಂದು ತಿಂಗಳ ಪಡಿತರ ಮತ್ತು 2,000 ವೆಚ್ಚವನ್ನು ಒದಗಿಸಬೇಕಾಗುತ್ತದೆ ಎಂದೂ ಹೇಳಿದೆ. 

ಪಂಚಾಯಿತಿ ನೀಡಿದ ಈ ತೀರ್ಪಿಗೆ ನಜಾಖತ್ ಹಾಗೂ ಆತನ ಇಬ್ಬರೂ ಪತ್ನಿಯರು ಒಪ್ಪಿಗೆ ಸೂಚಿಸಿದ್ದಾರೆ. ಪಂಚಾಯಿತಿಯಲ್ಲೇ ಸಮಸ್ಯೆ ಶಾಂತಿಯುತವಾಗಿ ಬಗೆಹರಿದ ಹಿನ್ನೆಲೆಯಲ್ಲಿ ಮೊದಲ ಪತ್ನಿ ಆಶ್ರಾ ಪೊಲೀಸರಿಗೆ ನೀಡಿದ್ದ ದೂರನ್ನು ವಾಪಸ್ ಪಡೆದಿದ್ದಾರೆ. ಪ್ರಸ್ತುತ ಇಬ್ಬರೂ ಪರಸ್ಪರ ಸಮ್ಮತಿಯಿಂದ ರಾಜಿಯಾಗಿದ್ದಾರೆ ಎಂದು ಸ್ಥಳೀಯ ಪೊಲೀಸರು ಸ್ಪಷ್ಟಪಡಿಸಿದ್ದಾರೆ.