ಸೋಮವಾರ, 26 ಅಕ್ಟೋಬರ್ 2026
Trending

2nd PU Result : ಪರೀಕ್ಷೆ ನಡೆಯುವಾಗಲೇ ಅಮ್ಮನ ಸಾವು- ದುಃಖದಲ್ಲಿಯೇ ಎಕ್ಸಾಂ ಬರೆದು 600 ಕ್ಕೆ 600 ಅಂಕ ತೆಗೆದ ದಕ್ಷಿಣ ಕನ್ನಡ ಜಿಲ್ಲೆಯ ದಿಶಾ !!

2nd Pu Result : ದ್ವಿತೀಯ PU ಪರೀಕ್ಷೆ ಆಗಷ್ಟೇ ಶುರುವಾಗಿತ್ತು. ಒಂದೆರಡು ಪರೀಕ್ಷೆಗಳು ಮುಗಿದಿದ್ದವು. ಹೀಗೆ ಪರೀಕ್ಷೆ  ನಡೆಯುತ್ತಿರುವಾಗಲೇ ಮೂಡುಬಿದಿರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ದಿಶಾ ತನ್ನ ಅಮ್ಮನನ್ನು ಕಳೆದುಕೊಂಡಿದ್ದಳು. ಆದರೂ ಕೂಡ ಈ ದಿಶಾ ಧೃತಿಗೆಡದೆ ಸಾಧನೆಯನ್ನೇ ಗುರಿಯಾಗಿಸಿಕೊಂಡು ಅಭ್ಯಾಸ ಮಾಡಿದ್ದ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 600 ಅಂಕ ಗಳಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

Sponsored

ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತಹ ಪರಿಸ್ಥಿತಿ. ಒಂದೆಡೆ ಹೆತ್ತ ತಾಯಿಯನ್ನು ಕಳೆದುಕೊಂಡ ದುಃಖ, ಇನ್ನೊಂದೆಡೆ ಭವಿಷ್ಯವನ್ನು ನಿರ್ಧರಿಸುವ ಇನ್ನುಳಿದ ಮೂರು ಪರೀಕ್ಷೆಗಳು. ಈ ಸಂಕಷ್ಟದ ಸಮಯದಲ್ಲಿ ಧೃತಿಗೆಡದ ದಿಶಾ, ತಾಯಿಯ ಕನಸನ್ನು ನನಸು ಮಾಡುವ ದೃಢ ಸಂಕಲ್ಪ ಮಾಡಿದರು. ಇದೀಗ ಅಂದುಕೊಂಡಂತೆ ಸಾಧನೆ ಮಾಡಿದ್ದಾರೆ. ಈಗ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಸಂಭ್ರಮದ ನಡುವೆ, ನೋವಿನಲ್ಲೂ ಅಚಲ ಛಲದಿಂದ ಸಾಧನೆಯ ಶಿಖರವೇರಿದ ವಿದ್ಯಾರ್ಥಿನಿ ದಿಶಾ ಅವರ ಕಥೆ ಎಲ್ಲರ ಕಣ್ಣಂಚನ್ನು ಒದ್ದೆ ಮಾಡಿದೆ.

Advertisement

ಈ ಬಗ್ಗೆ ಮಾತನಾಡಿದ ದಿಶಾ ಮೂರು ಪರೀಕ್ಷೆ ಬರೆದ ನಂತರ ತಾಯಿಯನ್ನು ಕಳೆದುಕೊಂಡೆ. ಆ ಸಂದರ್ಭದಲ್ಲಿ ಏನು ಮಾಡಬೇಕೆಂದು ತಿಳಿಯಲಿಲ್ಲ. ಯಾವ ಕಡೆ ಗಮನ ಕೊಡಬೇಕೆಂದು ಮೊದಲಿಗೆ ತೋಚಲಿಲ್ಲ. ಅದಾದ ನಂತರ ಒಂದನ್ನು ಕಳೆದುಕೊಂಡೆ. ಇನ್ನೊಂದನ್ನು ಕಳೆದುಕೊಳ್ಳುವುದು ಬೇಡವೆಂದು ಪರೀಕ್ಷೆಯೆಡೆಗೆ ಹೆಚ್ಚು ಗಮನ ಹರಿಸಿದೆ. ಆದರೆ ನನ್ನ ಲೆಕ್ಚರ್‌ಗಳು ತುಂಬಾ ಬೆನ್ನೆಲುಬಾಗಿ ನಿಂತರು. ಅಮ್ಮ ಬಿದ್ದು ತಲೆಗೆ ಪೆಟ್ಟಾಗಿತ್ತು. ಹೀಗಾಗಿ ಕಳೆದುಕೊಂಡೆ. ನನ್ನ ತಾಯಿ ಈಗ ಇದ್ದಿದ್ರೆ ತುಂಬಾ ಖುಷಿ ಪಡುತ್ತಿದ್ರು. ಹೇಗೆ ಹೇಳಬೇಕೆಂದು ಅರ್ಥ ಆಗುತ್ತಿಲ್ಲ. ನಾನು ಇಲ್ಲದ ಅಮ್ಮನಿಗೋಸ್ಕರವಾದ್ರೂ ಪರೀಕ್ಷೆ ಬರೆದು ಸಾಧನೆ ಮಾಡಬೇಕು ಎಂದು ದೃಢ ನಿಶ್ಚಯ ಮಾಡಿದೆ. ಅದಕ್ಕೆ ತುಂಬಾ ಕಷ್ಟಪಟ್ಟು ಏನಾದ್ರೂ ಆಗಲಿ. ಬೇಕು ಅಂತ ಡಿಸೈಡ್ ಮಾಡಿದೆ. ನಾನು ಚೆನ್ನಾಗಿ ಓದಬೇಕು ಎಂಬುದೇ ಅಮ್ಮನ ಆಸೆಯಾಗಿತ್ತು. ಅಮ್ಮನನ್ನು ಮನದಲ್ಲಿ ತುಂಬಿಕೊಂಡು ಅಭ್ಯಾಸದಲ್ಲಿ ಲಕ್ಷ್ಯವನ್ನು ಕೇಂದ್ರೀಕರಿಸಿದೆ. ಪರಿಶ್ರಮಕ್ಕೆ ಫಲಿತಾಂಶ ದೊರೆತಿದೆ ಎಂದಿದ್ದಾರೆ.

ದೇವರು ಇದ್ದಾನೆ ಹೆದರಬೇಡ ಎನ್ನುತ್ತಿದ್ದ ಅಮ್ಮ

ತಾಯಿಯ ನೆನಪುಗಳನ್ನು ಮೆಲುಕು ಹಾಕಿದ ದಿಶಾ, “ಪರೀಕ್ಷೆ ಬಗ್ಗೆ ಭಯವಾದಾಗಲೆಲ್ಲಾ ಅಮ್ಮ, ‘ನೀನು ಕಷ್ಟಪಟ್ಟಿದ್ದೀಯ, ದೇವರು ಇದ್ದಾನೆ, ಯಾರ ಹಣೆಯಲ್ಲಿ ಬರೆದಿದೆಯೋ ಅವರಿಗೆ ಸಿಗುತ್ತೆ, ಹೆದರಬೇಡ’ ಎಂದು ಧೈರ್ಯ ಹೇಳುತ್ತಿದ್ದರು. ಆ ಮಾತುಗಳೇ ನನಗೆ ಶಕ್ತಿಯಾದವು. ಅಮ್ಮ ಈಗ ಇದ್ದಿದ್ದರೆ ತುಂಬಾ ಖುಷಿ ಪಡುತ್ತಿದ್ದರು,” ಎಂದು ಕಣ್ಣೀರಾಗಿದ್ದಾರೆ. ದಿಶಾ ಅವರ ಈ ಸಾಧನೆ, ಜೀವನದಲ್ಲಿ ಎಂತಹದ್ದೇ ಕಷ್ಟಗಳು ಎದುರಾದರೂ ಗುರಿಯನ್ನು ತಲುಪಬಹುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.