ನೆಲ್ಯಾಡಿ: ರೆಖ್ಯಾ ಗ್ರಾಮದ ನೆಲ್ಯಡ್ಕ-ಇಡ್ಮಾಳ್ ನಿವಾಸಿ ಬಾಲಕೃಷ್ಣ ಗೌಡ ಅವರು ಶನಿವಾರ ಕಾಡಾನೆ ದಾಳಿಗೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ಮೃತರ ನಿವಾಸಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ತುರ್ತು ಪರಿಹಾರದ ಚೆಕ್ ಹಸ್ತಾಂತರ ಮಾಡಲಾಯಿತು.
ಘಟನೆಯ ಮಾಹಿತಿ ದೊರೆತ ಕೂಡಲೇ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮೃತ ಬಾಲಕೃಷ್ಣ ಗೌಡ ಅವರ ಕುಟುಂಬಕ್ಕೆ ರೂ.5 ಲಕ್ಷ ತುರ್ತು ಪರಿಹಾರ ವಿತರಣೆ ಮಾಡಲಾಗಿದೆ. ಹೊಸ ನಿಯಮಗಳ ಅನ್ವಯ ರೂ.20 ಲಕ್ಷ ಪರಿಹಾರ ಮಂಜೂರು ಮಾಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜೊತೆಗೆ ಸರಕಾರ ಹಾಗೂ ಅರಣ್ಯ ಇಲಾಖೆಯ ನಿಯಮಗಳಂತೆ ಕುಟುಂಬಕ್ಕೆ ಪ್ರತಿ ತಿಂಗಳು ರೂ.5000 ಮಾಸಾಶನವನ್ನೂ ನೀಡಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸುಳ್ಯ, ಕಡಬ, ಬೆಳ್ತಂಗಡಿ ಹಾಗೂ ಪುತ್ತೂರು ತಾಲೂಕುಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದ್ದು, ದಾಳಿ ಮತ್ತು ಗ್ರಾಮಗಳಿಗೆ ನುಗ್ಗುವ ಘಟನೆಗಳು ಸಂಭವಿಸುತ್ತಿದೆ. ಸರಕಾರ ಕಾಡಾನೆ ಹಾವಳಿ ನಿಯಂತ್ರಣ ಮಾಡಲು ಶಾಶ್ವತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಶನಿವಾರ ರಾತ್ರಿ ಚಾರ್ಮಾಡಿ ಗ್ರಾಮದ ಮಠದಮಜಲು ಎಂಬಲ್ಲಿ ಅನಂತರಾವ್ ಎಂಬುವವರ ತೋಟಕ್ಕೆ ನುಗಿದ್ದು, 50ಕ್ಕಿಂತ ಅಧಿಕ ಅಡಿಕೆ ಮರ, 10 ತೆಂಗಿನ ಮರ ಹಾಗೂ ಅಪಾರ ಪ್ರಮಾಣದಲ್ಲಿ ಬಾಳೆ ಕೃಷಿ ನಾಶ ಮಾಡಿದೆ. ಇನ್ನು ಚಾರ್ಮಾಡಿ ಘಾಟ್ನ 9 ನೇ ತಿರುವಿನ ಬಳಿ ಇಂದು ಒಂಟಿ ಕಾಡಾನೆಯೊಂದು ಕಂಡು ಬಂದಿದ್ದು, ರಸ್ತೆಯ ಮಧ್ಯೆ ಕೆಲಕಾಲ ನಿಂತಿದ್ದರಿಂದ ಬಿಗುವಿನ ವಾತಾವರಣ ಉಂಟಾಗಿತ್ತು.



