ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಚಾದ್ರಿ ಬೆಟ್ಟದಲ್ಲಿ ಟ್ರೆಕ್ಕಿಂಗ್ (ಚಾರಣ) ಮಾಡುತ್ತಿದ್ದ ವೇಳೆ ಕನ್ನಡ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಪಕ ಹಾಗೂ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಬಾ.ಮ. ಹರೀಶ್ ಅವರ ಪುತ್ರ ಉಲ್ಲಾಸ್ (28) ಅವರು ಶನಿವಾರ ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ಹಠಾತ್ ನಿಧನರಾಗಿದ್ದಾರೆ.
Sponsoredಪೊಲೀಸ್ ಮೂಲಗಳ ಪ್ರಕಾರ, ಉಲ್ಲಾಸ್ ಅವರು ಬೆಂಗಳೂರಿನ ‘ಚಾರಣ’ ಎಂಬ ಪ್ರವಾಸಿ ಸಂಸ್ಥೆಯ ಪ್ಯಾಕೇಜ್ ಟೂರ್ ಮೂಲಕ ತಮ್ಮ ಕುಟುಂಬದ ಆಪ್ತ ಸ್ನೇಹಿತ ಸುರೇಶ್ ಅವರೊಂದಿಗೆ ಶನಿವಾರ ಬೆಳಿಗ್ಗೆ 6.30ರ ಸುಮಾರಿಗೆ ಕೊಡಚಾದ್ರಿ ಗಿರಿಗೆ ಭೇಟಿ ನೀಡಿದ್ದರು. ಬೆಟ್ಟದ ಮೇಲಿರುವ ಪವಿತ್ರ ಸರ್ವಜ್ಞ ಪೀಠವನ್ನು ಸಂದರ್ಶಿಸಿ ವಾಪಸ್ಸಾಗುವಾಗ, ಪ್ರವಾಸಿ ಮಂದಿರದ ಮುಂಭಾಗದ ದೇವಸ್ಥಾನದ ಸಮೀಪ ಉಲ್ಲಾಸ್ ಅವರಿಗೆ ತೀವ್ರವಾಗಿ ಹೃದಯಾಘಾತ ಸಂಭವಿಸಿದೆ. ಅವರು ಸ್ಥಳದಲ್ಲೇ ಹಠತ್ತಾಗಿ ಕುಸಿದು ಬಿದ್ದಿದ್ದಾರೆ.
ಉಲ್ಲಾಸ್ ಕುಸಿದು ಬೀಳುತ್ತಿದ್ದಂತೆ ಅಲ್ಲಿದ್ದ ಸಹಚರರು ಹಾಗೂ ಸಹ ಪ್ರವಾಸಿಗರು ತಕ್ಷಣವೇ ಪ್ರಾಥಮಿಕ ಚಿಕಿತ್ಸೆಯಾಗಿ ಕೃತಕ ಉಸಿರಾಟ (CPR) ನೀಡಿದ್ದಾರೆ. ತದನಂತರ ಜೀಪ್ ಹಾಗೂ ಅಂಬ್ಯುಲೆನ್ಸ್ ಮೂಲಕ ನಗರದ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹೊಸನಗರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಉಲ್ಲಾಸ್ ಕೊನೆಯುಸಿರೆಳೆದಿದ್ದಾರೆ.
ಇತ್ತೀಚೆಗಷ್ಟೇ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನೊಬ್ಬ ಚಾರಣದ ವೇಳೆ ಕಣ್ಣು ಮುಚ್ಚಿರುವುದು ಇಡೀ ಕುಟುಂಬ ಹಾಗೂ ಚಿತ್ರರಂಗವನ್ನು ತೀವ್ರ ಶೋಕ ಸಾಗರದಲ್ಲಿ ಮುಳುಗಿಸಿದೆ.




