ಬೆಳಗಾವಿ: ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೋಡಣಿ ಗ್ರಾಮದಲ್ಲಿ ಕುತ್ತಿಗೆಗೆ ಜೋಕಾಲಿ ಸೀರೆ ಬಿಗಿದುಕೊಂಡು ಬಾಲಕಿ ಮೃತಪಟ್ಟಿದ್ದಾಳೆ. ಕೋಡಣಿ ಗ್ರಾಮದ ವಿದ್ಯಾರ್ಥಿನಿ ಶುಭ್ರಾ ಯುವರಾಜ ರಾವುತ ಪಾಟೀಲ (14) ಮೃತಪಟ್ಟ ಬಾಲಕಿ.
Sponsoredಮನೆಯ ಜಂತಿಗೆ ಸೀರೆಯನ್ನು ಜೋಕಾಲಿಯಂತೆ ಕಟ್ಟಿ ಆಟ ಆಡುವಾಗ ಆಕಸ್ಮಿಕವಾಗಿ ಸೀರೆ ಕುತ್ತಿಗೆಗೆ ಬಿಗಿದಿದ್ದು, ಬಾಲಕಿ ಸಾವಿಗೀಡಾಗಿದ್ದಾರೆ.
ಮಳೆಯ ಕಾರಣ ಬುಧವಾರ ಶಾಲೆಗಳಿಗೆ ರಜೆ ಘೋಷಿಸಿದ್ದರಿಂದ ಬಾಲಕಿ ಮನೆಯಲ್ಲಿದ್ದಳು. ತಂದೆ, ತಾಯಿ ಕೆಲಸಕ್ಕೆ ಹೋಗಿದ್ದು, ಅಜ್ಜಿ ಪಂಢರಪುರ ಯಾತ್ರೆಗೆ ಹೋಗಿದ್ದು, ಅಜ್ಜ ಮಾತ್ರ ಮನೆಯಲ್ಲಿದ್ದರು.
ಜೋಕಾಲಿ ಆಡುವಾಗ ಕುತ್ತಿಗೆಗೆ ಸೀರೆ ಬಿಗಿದಿರುವುದನ್ನು ಕಂಡು ಅಜ್ಜ ಬೊಬ್ಬೆ ಹೊಡೆದಿದ್ದು, ಅಕ್ಕಪಕ್ಕದವರು ದೌಡಾಯಿಸಿ ಬಾಲಕಿಯನ್ನು ಸೀರೆ ಉರುಳಿನಿಂದ ಬಿಡಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಆ ವೇಳೆಗಾಗಲೇ ಬಾಲಕಿ ಶುಭ್ರಾ ಸಾವಿಗೀಡಾಗಿದ್ದಾಳೆ ಎಂದು ವರದಿಯಾಗಿದೆ.




