ಶನಿವಾರ, 24 ಅಕ್ಟೋಬರ್ 2026

ಗುರುವಾಯನಕೆರೆ 19 ವರ್ಷದ ಬಾಲಕ ಕಾಲೇಜಿನ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ

ಬೆಳ್ತಂಗಡಿ: ತಾಲೂಕಿನ ಗುರುವಾಯನಕೆರೆ ಖಾಸಗಿ ಕಾಲೇಜಿನ ವಿದ್ಯಾರ್ಥಿ ವಸತಿ ನಿಲಯದಲ್ಲಿ 19ರ ಹರೆಯದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.31 ರಂದು ನಡೆದಿದೆ.

ಪೊಲೀಸರ ಮಾಹಿತಿ ಪ್ರಕಾರ, ಎಡಮಂಗಲದ ನಿವಾಸಿ ಹಾಗೂ ಹಾಸ್ಟೆಲ್‌ ವಾರ್ಡನ್‌ ಅವಿನ್‌ ಕುಮಾರ್‌ ಬಿ ಅವರು ನೀಡಿದ ದೂರಿನನ್ವಯ, ಜು.31 ರಂದು ಬೆಳಿಗ್ಗೆ ಸುಮಾರು 11.40ಕ್ಕೆ ವಿದ್ಯಾರ್ಥಿ ಮದನ್‌ ರೆಡ್ಡಿ ಹೊಟ್ಟೆನೋವು ಮತ್ತು ವಾಂತಿ ಆಗುತ್ತಿರುವುದಾಗಿ ತಿಳಿಸಿ ವಿಶ್ರಾಂತಿ ಪಡೆಯಲು ಅನುಮತಿ ಕೇಳಿದ್ದು, ವಾರ್ಡನ್‌ ಅವರು ಪ್ರಾಂಶುಪಾಲರಿಂದ ಅನುಮತಿ ಪಡೆದು ವಿಶ್ರಾಂತಿಗೆ ತೆರಳುವಂತೆ ಸೂಚನೆ ನೀಡಿದ್ದರು. ನಂತರ 12.30ಕ್ಕೆ ವಾರ್ಡನ್‌ ಕೊಠಡಿಗೆ ತೆರಳಿ ನೋಡಿದಾಗ ವಿದ್ಯಾರ್ಥಿ ಅಲ್ಲಿ ಇರಲಿಲ್ಲ. ಕೊಠಡಿ ಬಾಗಿಲು ತೆರಳಿದಾಗ ಬಾಗಿಲು ಒಳಗಿನಿಂದ ಗೋಡ್ರೆಜ್‌ ಅಳವಡಿಸಿದ್ದರಿಂದ ತೆಗೆಯಲು ಅಡ್ಡಿಯಾಗಿದೆ.

ಬಾಗಿಲನ್ನು ಬಲವಂತದಿಂದ ತೆರೆದು ನೋಡಿದಾಗ, ಕೊಠಡಿಯ ಸೀಲಿಂಗ್‌ ಫ್ಯಾನಿಗೆ ನೈಲಾನ್‌ ಹಗ್ಗ ಕಟ್ಟಿ ಮದನ್‌ ರೆಡ್ಡಿ ನೇಣು ಬಿಗಿದು ಆತ್ಮಹತ್ಯೆ ಮಾಡಿರುವುದು ಪತ್ತೆಯಾಗಿದೆ. ಘಟನೆಯ ಕುರಿತು ಮಾಹಿತಿ ಪಡೆದ ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.