ಸೋಮವಾರ, 26 ಅಕ್ಟೋಬರ್ 2026
Trending

ಸಂಪ್‌ಗೆ ಬಿದ್ದು 18 ತಿಂಗಳ ಮಗು ಸಾವು- ಬದುಕಿಸಲು ಮೃತದೇಹ ಉಪ್ಪಿನಲ್ಲಿಟ್ಟು, ಕುರಾನ್‌ ಪಠಿಸಿದ ಪೋಷಕರು!

ಎದುರಿನ ಮನೆಯ ನೀರಿನ ಟ್ಯಾಂಕ್‌ಗೆ ಬಿದ್ದು 18 ತಿಂಗಳ ಹೆಣ್ಣು ಮಗುವೊಂದು ಮೃತಪಟ್ಟಿರುವ ದಾರುಣ ಘಟನೆ ಬಾಗಲಕೋಟೆಯ ನವನಗರದ ಸೆಕ್ಟರ್ ನಂಬರ್ 38 ರಲ್ಲಿ ನಡೆದಿದೆ. ಆದರೆ, ಮಗುವಿನ ಸಾವಿನ ನಂತರ ಆಕೆಯನ್ನು ಬದುಕಿಸಲು ಪೋಷಕರು ನಡೆಸಿದ ವಿಲಕ್ಷಣ ಪ್ರಯತ್ನ ಮತ್ತು ಮೂಢನಂಬಿಕೆಯ ನಡೆ ಈಗ ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Sponsored

ಮೃತ ಮಗುವನ್ನು ಅಮೀನಾ ಪಟಾಣ್ ಎಂದು ಗುರುತಿಸಲಾಗಿದೆ.ಮಗು ಅಮೀನಾ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಎದುರಿನ ಮನೆಯವರ ಸಂಪ್‌ಗೆ ಬಿದ್ದಿದೆ. ಮಗು ನೀರಿನಲ್ಲಿ ಮುಳುಗಿದ್ದನ್ನು ತಡವಾಗಿ ಗಮನಿಸಲಾಗಿದ್ದು, ಅಷ್ಟರಲ್ಲೇ ಮಗು ಕೊನೆಯುಸಿರೆಳೆದಿದೆ. ಮಗು ಮೃತಪಟ್ಟಿದ್ದರೂ ಅದನ್ನು ಒಪ್ಪಿಕೊಳ್ಳದ ಪೋಷಕರು ಮತ್ತು ಕುಟುಂಬಸ್ಥರು, ಮಗುವನ್ನು ಹೇಗಾದರೂ ಮಾಡಿ ಬದುಕಿಸಲೇಬೇಕು ಎಂದು ಮುಂದಾಗಿದ್ದಾರೆ. ಮಗು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರೂ, “ನೀರಿನಲ್ಲಿ ಮುಳುಗಿದವರನ್ನು ಉಪ್ಪಿನಲ್ಲಿ ಮುಳುಗಿಸಿಟ್ಟರೆ ಮರಳಿ ಬದುಕುತ್ತಾರೆ” ಎಂಬ ತಪ್ಪು ನಂಬಿಕೆಯಿಂದ ಪೋಷಕರು ಮಗುವನ್ನು ಬದುಕಿಸಿಕೊಳ್ಳಲು ವಿಶಿಷ್ಟ ಪ್ರಯತ್ನ ನಡೆಸಿದ್ದಾರೆ. 

Advertisement
Advertisement

ಹೌದು, ಬಾಗಲಕೋಟೆ ಜಿಲ್ಲಾಸ್ಪತ್ರೆಯ ಶವಾಗಾರದ ಮುಂಭಾಗದಲ್ಲೇ ಮಗುವಿನ ಮುಖವನ್ನು ಮಾತ್ರ ಹೊರಗಿಟ್ಟು, ಇಡೀ ದೇಹವನ್ನು ಉಪ್ಪಿನಲ್ಲಿ ಮುಳುಗಿಸಿ ಇಡಲಾಗಿತ್ತು. ಇದರೊಂದಿಗೆ ಮಗುವಿನ ಕಿವಿಯ ಬಳಿ ಮೊಬೈಲ್‌ನಲ್ಲಿ ಕುರಾನ್ ಪಠಣವನ್ನು ಹಾಕಿ, ಮಗು ಹೇಗಾದರೂ ಮಾಡಿ ಬದುಕಲಿ ಎಂದು ಪೋಷಕರು ಹಾಗೂ ಕುಟುಂಬಸ್ಥರು ಪ್ರಾರ್ಥಿಸುತ್ತಾ ಕಣ್ಣೀರಿಟ್ಟ ದೃಶ್ಯ ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆಯಾಗಿಸಿತು.

ಮಗುವಿಗೆ ಮತ್ತೆ ಜೀವ ಬರಬಹುದು ಎಂಬ ಆಸೆಯಿಂದ ಪೋಷಕರು ಸರಿಸುಮಾರು ಎರಡು ತಾಸಿಗೂ ಅಧಿಕ ಕಾಲ ಮಗುವಿನ ದೇಹವನ್ನು ಉಪ್ಪಿನಲ್ಲೇ ಇಟ್ಟಿದ್ದರು. ಆದರೆ ಯಾವುದೇ ಪವಾಡಗಳು ನಡೆಯದಿದ್ದಾಗ ಮತ್ತು ಮಗುವಿನಲ್ಲಿ ಯಾವುದೇ ಚಲನೆ ಕಾಣಿಸದಿದ್ದಾಗ ಪೋಷಕರು ನಿರಾಶೆಗೊಂಡಿದ್ದಾರೆ. ಎರಡು ಗಂಟೆಗಳ ನಂತರ ಸ್ಥಳದಲ್ಲಿದ್ದ ವೈದ್ಯರು ಪೋಷಕರಿಗೆ ತಿಳಿಹೇಳಿ, ವೈದ್ಯಕೀಯ ಸಲಹೆಗಳನ್ನು ನೀಡಿದ್ದಾರೆ. ವೈದ್ಯರ ಮಾತನ್ನು ಕೇಳಿದ ಕುಟುಂಬಸ್ಥರು ಕೊನೆಗೂ ಮಗುವಿನ ದೇಹವನ್ನು ಉಪ್ಪಿನಿಂದ ಹೊರಗೆ ತೆಗೆದಿದ್ದಾರೆ. ಬಳಿಕ ಮಗುವಿನ ಮರಣೋತ್ತರ ಪರೀಕ್ಷೆಗೆ (Post-Mortem) ಒಪ್ಪಿಗೆ ಸೂಚಿಸಿದ್ದು, ತಂದಿದ್ದ ಉಪ್ಪನ್ನು ಹೊರಗಡೆ ಎಸೆದಿದ್ದಾರೆ. ಸದ್ಯ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಮಗುವಿನ ಶವಪರೀಕ್ಷೆ ಕಾರ್ಯ ನಡೆದಿದೆ.

Advertisement