ಶನಿವಾರ, 24 ಅಕ್ಟೋಬರ್ 2026

ಉಳ್ಳಾಲ: ಕತ್ತಿ ಹಿಡಿದು ಸಾರ್ವಜನಿಕರಿಗೆ ಬೆದರಿಕೆ, ಇಬ್ಬರ ಬಂಧನ

ಉಳ್ಳಾಲ: ಮಧ್ಯರಾತ್ರಿ ಕುಡಿದ ಮತ್ತಿನಲ್ಲಿ ಕತ್ತಿ ಹಿಡಿದು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರೌಡಿಶೀಟರ್‌ ಸೇರಿ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಶನಿವಾರ ತಡರಾತ್ರಿ ಬಂಧನ ಮಾಡಿದ್ದಾರೆ.

ಮಾರ್ಗತಲೆ ಉಳ್ಳಾಲ ನಿವಾಸಿ, ವೃತ್ತಿಯಲ್ಲಿ ವೆಲ್ಡಿಂಗ್‌ ಕೆಲಸ ಮಾಡುತ್ತಿರುವ ರೌಡಿಶೀಟರ್‌ ಮಹಮ್ಮದ್‌ ಶಕೀರ್‌ (31) ಹಾಗೂ ಮಂಚಿಲ ಉಳ್ಳಾಲ ನಿವಾಸಿ, ಆಟೋ ಚಾಲಕ ಅಶ್ಫಾಕ್‌ (28) ಬಂಧಿತ ಆರೋಪಿಗಳು.

ಶನಿವಾರ ತಡರಾತ್ರಿ 12 ರಿಂದ 12.20 ರ ಸುಮಾರಿಗೆ ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಮಹಮ್ಮದ್‌ ಶಕೀರ್‌ ಮದ್ಯಸೇವನೆ ಮಾಡಿ, ಕತ್ತಿ ಹಿಡಿದು ರಂಪಾಟ ಮಾಡಿದ್ದು, ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿರುವ ದೃಶ್ಯ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಕೂಡಲೇ ಕಾರ್ಯಾಚರಣೆ ಮಾಡಿದ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.