ಶನಿವಾರ, 24 ಅಕ್ಟೋಬರ್ 2026

ಉಡುಪಿ: ಬಾಳೆಹಣ್ಣಿಗೆ ಕೃತಕ ಬಣ್ಣ-ವ್ಯಾಪಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

ಉಡುಪಿ,ಆ.20: ಬಾಳೆಕಾಯಿಗಳಿಗೆ ರಾಸಾಯನಿಕಗಳನ್ನು ಬಳಸಿ ಕೃತಕವಾಗಿ ಹಣ್ಣಾಗಿಸುವ ಜಾಲದ ವಿರುದ್ಧ ಉಡುಪಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಳಿ ಮಾಡಲಾಗಿದೆ. ಅಲೆವೂರು, ಕೆಮ್ತೂರು ಹಾಗೂ ಮಣಿಪಾಲದ ದುಗ್ಲಿ ಪರಿಸರದಲ್ಲಿರುವ ಪ್ರಮುಖ ಬಾಳೆಹಣ್ಣು ದಾಸ್ತಾನು ಕೇಂದ್ರ ಹಾಗೂ ಗೋದಾಮುಗಳ ಮೇಲೆ ಗುರುವಾರ ಮುಂಜಾನೆ ದಾಳಿ ಮಾಡಲಾಗಿದೆ.

ಉಡುಪಿ ಸಹಾಯಕ ಕಮೀಷನರ್‌ ರಶ್ಮಿ ಎಸ್‌ ಆರ್‌ ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ರಖಂ ವ್ಯಾಪಾರಸ್ಥರು ಮತ್ತು ದಾಸ್ತಾನುದಾರರ ಗೋದಾಮುಗಳಿಗೆ ದಾಳಿ ಮಾಡಿದ್ದು, ಈ ಸಂದರ್ಭದಲ್ಲಿ ಬಾಳೆಹಣ್ಣುಗಳಿಗೆ ಹಳದಿ ಬಣ್ಣ ಬರುವಂತಾಗಲು ಕೃತಕವಾಗಿ ಹಣ್ಣಾಗಿಸಲು ಕೆಮಿಕಲ್‌, ಕೃತಕ ಬಣ್ಣ ಹಾಗೂ ಇತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಸಾರ್ವಜನಿಕರ ಆರೋಗ್ಯದಲ್ಲಿ ಚೆಲ್ಲಾಟವಾಡುತ್ತಿರುವ ವ್ಯಾಪಾರಿಗಳು ಹಾಗೂ ಗೋದಾಮು ಮಾಲೀಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ.