ಉಡುಪಿ ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಡೇವಿಡ್ ಡಿಸೋಜ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಉತ್ತರ ಭಾರತದ ವ್ಯಕ್ತಿಯೊಬ್ಬ ಡೇವಿಡ್ ಹತ್ಯೆಗೆ ಸುಪಾರಿ ನೀಡಿರುವುದನ್ನ ಪತ್ತೆಹಚ್ಚಿದ್ದಾರೆ ಎಂದು ವರದಿಯಾಗಿದೆ.
ಹೌದು, ಯುಪಿಸಿಎಲ್ ಗುತ್ತಿಗೆ ವಿಚಾರಕ್ಕೆ ಸಂಬಂಧಿಸಿದ ಆರ್ಥಿಕ ವೈಮನಸ್ಸೇ ಉಡುಪಿ ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಡೇವಿಡ್ ಡಿಸೋಜ ಹತ್ಯೆಗೆ ಪ್ರಮುಖ ಕಾರಣವಾಗಿರಬಹುದೇ ಎಂಬ ಅನುಮಾನ ಇದೀಗ ತನಿಖೆಯಲ್ಲಿ ವ್ಯಕ್ತವಾಗಿದೆ.
ಈ ಬಗ್ಗೆ ಎಸ್ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದು, ಡೇವಿಡ್ ಹಾಗೂ ಮತ್ತೊಬ್ಬ ಗುತ್ತಿಗೆದಾರನ ನಡುವೆ ಸುಮಾರು 23 ಕೋಟಿ ರೂ. ಮೌಲ್ಯದ ಯುಪಿಸಿಎಲ್ ಗುತ್ತಿಗೆ ವಿಚಾರದಲ್ಲಿ ಆರ್ಥಿಕ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ. ಇದೇ ವೈಮನಸ್ಸು ಹತ್ಯೆಗೆ ಪ್ರಮುಖ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.
ಅಲ್ಲದೆ ಹತ್ಯೆ ಪ್ರಕರಣದಲ್ಲಿ ಶೂಟರ್ ಆಗಿ ಆರೋಪಿಸಲಾಗಿರುವ ರಾಜು ಅವರ ಬ್ಯಾಂಕ್ ಖಾತೆಗೆ ಕೊಲೆಗೂ ಮುನ್ನವೇ 2 ಲಕ್ಷಕ್ಕೂ ಅಧಿಕ ಹಣ ವರ್ಗಾವಣೆಯಾಗಿತ್ತು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೊಲೆ ನಡೆದ ಬಳಿಕವೂ ಹಂತ ಹಂತವಾಗಿ ಹಣ ಪಾವತಿಯಾಗಿರುವ ಮಾಹಿತಿಯನ್ನ ಪೊಲೀಸರು ಕಲೆಹಾಕಿದ್ದಾರೆ. ಹತ್ಯೆಗೆ ಸುಪಾರಿ ನೀಡಿದ ವ್ಯಕ್ತಿಯ ಪತ್ತೆಗಾಗಿ ವಿಶೇಷ ಪೊಲೀಸ್ ತಂಡವೊಂದನ್ನ ಹೊರರಾಜ್ಯಕ್ಕೆ ಕಳುಹಿಸಲಾಗಿದೆಯಂತೆ.



