ಉಡುಪಿ: ಉದ್ಯಮಿ ಡೇವಿಡ್ ಡಿಸೋಜ ಕೊಲೆ ಪ್ರಕರಣ, 10 ಜನರ ಬಂಧನ
ಉಡುಪಿ: ಕಾಪು ತಾಲೂಕಿನ ಮುದರಂಗಡಿಯಲ್ಲಿ ನಡೆದಿದ್ದ ಉದ್ಯಮಿ ಡೇವಿಡ್ ಡಿಸೋಜ ಭೀಕರ ಕೊಲೆ ಪ್ರಕರಣಕ್ಕೆ ಕುರಿತಂತೆ 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದು, ಸಂಘಟಿತ ಅಪರಾಧದ ಹಸ್ತಕ್ಷೇಪ ಕಂಡು ಬಂದ ಕಾರಣ ಕಠಿಣ ಕೋಕ ಕಾಯ್ದೆಯಡಿ ತನಿಖೆ ನಡೆಸಲು ಪೊಲೀಸರಿಗೆ ಅನುಮತಿ ಲಭಿಸಿದೆ.
Sponsoredಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿದ್ದ ಮೂವರು ಆರೋಪಿಗಳು ಭಟ್ಕಳದತ್ತ ಬಸ್ಸಿನಲ್ಲಿ ಪರಾರಿಯಾಗುತ್ತಿದ್ದಾರೆ ಎನ್ನುವ ಖಚಿತ ಮಾಹಿತಿಯ ಆಧಾರದ ಮೇಲೆ ಬೈಂದೂರಿನ ಒತ್ತಿನಾಣೆ ಬಳಿ ಬಸ್ಸನ್ನು ತಡೆದು ತಪಾಸಣೆ ನಡೆಸಿದಾಗ ಆರೋಪಿಗಳು ಇಳಿದು ಓಡಲು ಯತ್ನ ಮಾಡಿದ್ದಾರೆ.
ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಪಿಸ್ತೂಲಿನಿಂದ ಗುಂಡು ಹಾರಿಸಿ, ಕಾಪು ಪಿಎಸ್‌ಐ ಅವರನ್ನು ತಳ್ಳಿ ಪರಾರಿಯಾಗಲು ಯತ್ನ ಮಾಡಿದ್ದು, ಕೂಡಲೇ ಪೊಲೀಸರು ಆತ್ಮರಕ್ಷಣೆಗಾಗಿ ಮುಖ್ಯ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಉತ್ತರ ಪ್ರದೇಶ ಮೂಲದ ರಾಜು @ ಫೌಜಿ (42) ಎಂದು ಗುರುತಿಸಲಾಗಿದ್ದು, ಈತನೇ ಡೇವಿಡ್‌ಗೆ ಗುಂಡು ಹಾರಿಸಿ ಕೊಲೆ ಮಾಡಿದ ಪ್ರಮುಖ ಆರೋಪಿಯಾಗಿದ್ದಾನೆ.
ಉದ್ಯಮಿ ಡೇವಿಡ್ ಡಿಸೋಜಾ ಅವರ ಕೊಲೆ ಹಾಗೂ ಅಪರಾಧ ಸಂಚಿನಲ್ಲಿ ಭಾಗಿಯಾಗಿದ್ದ 10 ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉತ್ತರ ಪ್ರದೇಶ ಮೂಲದ ಪ್ರಮುಖ ಶೂಟರ್ ರಾಜು @ ಫಾಜಿ, ಉತ್ತರಾಖಂಡದ ಅನ್ಮೋಲ್ ರಸ್ತೋಗಿ, ಬಿಹಾರದ ಜಿಯಾಹುಲ್ ವಜೂಲ್ ಶೇಖ್, ಸೂರಜ್ ಕುಮಾರ್ ಹಾಗೂ ಅನೂಜ್ ಕುಮಾರ್ ಕಮಲೇಶ್ವರ ಪ್ರಸಾದ್ ಪಟೇಲ್ ಸೇರಿದ್ದಾರೆ.
ಇವರ ಜೊತೆ ಎರ್ಮಾಳಿನ ಚಿರಾಗ್ ಪೂಜಾರಿ, ಮೊಹಮ್ಮದ್ ಇರ್ಷಾದ್ ಮತ್ತು ಸದಾನಂದ ದೇವಾಡಿಗ, ಕಾಪು ತಾಲೂಕಿನ ಅದಮಾರು ಗ್ರಾಮದ ಕಿಶೋರ್ ರಾಮ ಪೂಜಾರಿ ಹಾಗೂ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಲೋಕೇಶ್ ತೇಜ ಕೊಠಾರಿಯನ್ನು ಬಂಧನ ಮಾಡಲಾಗಿದೆ. ಈ ಪ್ರಕರಣದ 11 ನೇ ಆರೋಪಿಯಾಗಿರುವ ಭೂಗತ ಪಾತಕಿ ಹೇಮಂತ್ ಪೂಜಾರಿ ಪ್ರಸ್ತುತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಹುಡುಕಾಟ ನಡೆಯುತ್ತಿದೆ.
ಪ್ರಕರಣದ ಕುರಿತ ಎಲ್ಲಾ ಕಡತಗಳನ್ನು ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ಕೋಕ ನ್ಯಾಯಾಲಯಕ್ಕೆ ಹಸ್ತಾಂತರ ಮಾಡಲಾಗಿದೆ. ಬಂಧಿತ ಎಲ್ಲಾ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.




