ಬೆಳಗಾವಿಯಲ್ಲಿ ಗಣೇಶೋತ್ಸವದ ಸಂಭ್ರಮದ ನಡುವೆಯೇ ಬೆಂಕಿ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡು, ಇಬ್ಬರು ಗಂಭೀರವಾಗಿ ಗಾಯಗೊಂಡು, ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ರಾಜ್ಯದ ಜನರನ್ನು ಬೆಚ್ಚಿಬೀಳಿಸಿತ್ತು. ಸದ್ಯ ಈ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದ್ದು ಇದು ಆಕಸ್ಮಿಕ ಘಟನೆ ಎಲ್ಲಾ ಸಾಮೂಹಿಕ ಹತ್ಯೆಯ ಬಿಗ್ ಮಾಸ್ಟರ್ ಪ್ಲಾನ್ ಆಗಿದೆಯಾ ಎಂಬ ಬಲವಾದ ಅನುಮಾನ ಕಾಡಲು ಶುರುವಾಗಿದೆ.
Sponsoredಈ ಅಪಘಾತದಲ್ಲಿ ಗಜಾನನ ದಮೋನೆ (65), ರೋಷನ ದಮೋನೆ (21), ಶಾರಧಾ ದಮೋನೆ (45) ಹಾಗೂ ಭಾರತಿ ದಮೋನೆ (50) ಮೃತಪಟ್ಟವರು. ಅವಘಡದಲ್ಲಿ ಪ್ರಿಯಾ ದಮೋನೆ (28) ಹಾಗೂ ಗಂಗಾ ದಮೋನೆ (25) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಅವರು ಕೂಡ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಇಡೀ ಕುಟುಂಬವೇ ಈ ದುರಂತದಲ್ಲಿ ನಾಶವಾಗಿತ್ತು. ಆಕಸ್ಮಿಕ ಬೆಂಕಿ ಅವಘಡ ಎಂದೇ ಭಾವಿಸಲಾಗಿದ್ದ ಈ ಘಟನೆ ಈಗ ಯೋಜಿತ ಕೊಲೆ ಎಂಬ ಅನುಮಾನ ಮೂಡಿದ್ದು, ತನಿಖೆಯಲ್ಲಿ ಲಭ್ಯವಾಗಿರುವ ಸಿಸಿಟಿವಿ ದೃಶ್ಯಗಳು(CCTV) ಬೆಚ್ಚಿಬೀಳಿಸಿವೆ.
ಸಿಸಿಟಿವಿಯಿಂದ ತಿರುವು
ಬೆಂಕಿ ಕಾಣಿಸಿಕೊಳ್ಳುವುದಕ್ಕೂ ಕೆಲವೇ ಕ್ಷಣಗಳ ಮೊದಲು ಚವಾಟ್ ಗಲ್ಲಿಯಲ್ಲಿ ಅಪರಿಚಿತ ವ್ಯಕ್ತಿಗಳು ಕೈಯಲ್ಲಿ ಬಕೆಟ್ ಹಿಡಿದುಕೊಂಡು ಅನುಮಾನಾಸ್ಪದವಾಗಿ ಓಡಾಡಿರುವುದು CCTV ಯಲ್ಲಿ ಸೆರೆಯಾಗಿದೆ. ಕೈಯಲ್ಲಿ ಬಕೆಟ್ ಹೊತ್ತು ಶೆಡ್ ಬಳಿ ಹೋದ ವ್ಯಕ್ತಿಗಳು ಕೇವಲ ಐದು ನಿಮಿಷಗಳ ಅಂತರದಲ್ಲಿ ಬರಿಗೈಯಲ್ಲಿ ವೇಗವಾಗಿ ಓಡಿ ಪರಾರಿಯಾಗಿದ್ದಾರೆ.
ಬಕೆಟ್ನಲ್ಲಿ ತರಲಾಗಿದ್ದು ಪೆಟ್ರೋಲ್, ಸೀಮೆಎಣ್ಣೆ ಅಥವಾ ಇತರ ಯಾವುದೇ ದಹನಕಾರಿ ರಾಸಾಯನಿಕವೇ? ಉದ್ದೇಶಪೂರ್ವಕವಾಗಿ ಹೊರಗಿನಿಂದ ಬೆಂಕಿ ಹಚ್ಚಿ, ನಂತರ ಅದನ್ನು ಫ್ರಿಡ್ಜ್ ಸ್ಫೋಟದಂತೆ ಬಿಂಬಿಸಲು ಸಂಚು ರೂಪಿಸಲಾಗಿತ್ತೇ ಎಂಬ ಬಲವಾದ ಅನುಮಾನ ಮೂಡಿದೆ. ಪ್ರಕರಣವು ಈಗ ಸಾಮೂಹಿಕ ಕೊಲೆಯ ಶಂಕೆ ಹುಟ್ಟುಹಾಕಿರುವ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ ಅವರು ವಿಶೇಷ ತಂಡವನ್ನು ರಚಿಸಿದ್ದಾರೆ.
ಶೆಡ್ ಬಳಿ ಬಂದು ಪರಾರಿಯಾದ ಆ ಅಪರಿಚಿತ ಆಗಂತುಕರು ಯಾರು? ಬಕೆಟ್ನಲ್ಲಿ ತಂದಿದ್ದ ದ್ರವ ಯಾವುದು? ದಮೋನೆ ಕುಟುಂಬಕ್ಕೆ ಸ್ಥಳೀಯವಾಗಿ ಆಸ್ತಿ, ಹಣಕಾಸು ಅಥವಾ ವೈಯಕ್ತಿಕ ದ್ವೇಷದ ಹಿನ್ನೆಲೆ ಇತ್ತೇ ಈ ಆಯಾಮದಲ್ಲಿ ತನಿಖೆ ಆರಂಭಿಸಿದ್ದಾರೆ.




