ಶನಿವಾರ, 24 ಅಕ್ಟೋಬರ್ 2026

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ –ವರ್ಷದ ನಂತರ ಎನ್‌ಐಎ ತಂಡ ಮರಳಿದ್ದೇಕೆ?

ಮಂಗಳೂರು: ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ಪ್ರಕರಣದ ತನಿಖೆ ಈಗ ಮತ್ತೆ ಚುರುಕುಗೊಂಡಿದ್ದು, ರಾಷ್ಟ್ರೀಯ ತನಿಖಾ ಏಜೆನ್ಸಿ ಅಧಿಕಾರಿಗಳ ತಂಡವು ಒಂದು ವರ್ಷದ ನಂತರ ಮತ್ತೆ ದಿಢೀ‌ರ್ ಆಗಿ ಬಜಪೆ ಪೊಲೀಸ್ ಠಾಣೆಗೆ ಆಗಮಿಸಿದೆ.

ಎನ್‌ಐಎ ಡಿವೈಎಸ್ಪಿ ರಾಜವ್ ಸಿಂಗ್ ಮತ್ತು ಇನ್ಸ್‌ಪೆಕ್ಟ‌ರ್ ಮಲ್ಲಿಕಾರ್ಜುನ್ ಸೇರಿದಂತೆ ಐವರು ಹಿರಿಯ ಅಧಿಕಾರಿಗಳ ತಂಡ ಮಂಗಳವಾರ ಬಜಪೆಗೆ ಭೇಟಿ ನೀಡಿದೆ. ಸದ್ಯ ಬಜಪೆ ಪೊಲೀಸ್‌ ಠಾಣೆಯಲ್ಲೇ ಬೀಡುಬಿಟ್ಟಿರುವ ಅಧಿಕಾರಿಗಳು, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ಮರುಪರಿಶೀಲಿಸುತ್ತಿದ್ದಾರೆ. ಪ್ರಕರಣದ ಪ್ರಮುಖ ಶಂಕಿತರ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಸ್ಥಳೀಯ ಕೆಲವು ವ್ಯಕ್ತಿಗಳಿಗೆ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದಾರೆ.

ಕಳೆದ ವರ್ಷ, ಅಂದರೆ 2025ರ ಆಗಸ್ಟ್ 2ರಂದು ಮಂಗಳೂರು ಹೊರವಲಯದ ಸುರತ್ಕಲ್ ಮತ್ತು ಬಜಪೆ ಪೊಲೀಸ್‌ ಠಾಣೆ ವ್ಯಾಪ್ತಿಯ ಸುಮಾರು 14 ಸ್ಥಳಗಳ ಮೇಲೆ ಎನ್‌ಐಎ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ಹತ್ಯೆಗೆ ಸಂಬಂಧಿಸಿದ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದೀಗ ಸರಿಯಾಗಿ ಒಂದು ವರ್ಷದ ಬಳಿಕ ಕರಾವಳಿಗೆ ಮರಳಿರುವ ಎನ್‌ಐಎ ತಂಡ, ನಿಷೇಧಿತ ಪಿಎಫ್‌ಐ ಸಂಘಟನೆಯೊಂದಿಗೆ ನಂಟು ಹೊಂದಿರುವ ಕೆಲವರನ್ನು ಕರಸಿ ವಿಚಾರಣೆ ನಡೆಸಲು ಮುಂದಾಗಿದೆ. ದಾಳಿಯ ವೇಳೆ ಸಿಕ್ಕಿದ್ದ ಡಿಜಿಟಲ್ ಪುರಾವೆ ಹಾಗೂ ದಾಖಲೆಗಳ ಆಧಾರದ ಮೇಲೆ ಈ ದಿಢೀರ್ ಕಾರ್ಯಾಚರಣೆ ನಡೆದಿದೆ ಎನ್ನಲಾಗಿರುವ ಕುರಿತು ವರದಿಯಾಗಿದೆ.