ಶನಿವಾರ, 24 ಅಕ್ಟೋಬರ್ 2026

ಮಂಗಳೂರು: ಮನೆಮಂದಿ ಮಲಗಿದ್ದಾಗ ಯುವತಿ ಮನೆಯಿಂದ ನಾಪತ್ತೆ, ಲುಕ್‌ಔಟ್‌ ನೋಟಿಸ್‌ ಜಾರಿ

ಮಂಗಳೂರು: ಮನೆಮಂದಿ ಮಲಗಿದ್ದ ಸಮಯದಲ್ಲಿ ಬೆಳಗ್ಗಿನ ಜಾವ ಯುವತಿಯೋರ್ವಳು ಮನೆಯಿಂದ ನಾಪತ್ತೆಯಾಗಿರುವ ಘಟನೆ ನರಿಂಗಾನ ಗ್ರಾಮದಲ್ಲಿ ನಡೆದಿದೆ. ಇಬ್ರಾಹಿಂ ಎಂ ಅವರ ಮಗಳು ರಾಭಿಯತುಲ್‌ ಅಧಭಿಯ (19) ನಾಪತ್ತೆಗೊಂಡ ಯುವತಿ.

ಯುವತಿಯ ತಂದೆ ನೀಡಿದ ದೂರಿನ ಅನುಸಾರ, ಮೇ 3 ರ ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಊಟದ ನಂತರ ಮಲಗಲು ಹೋಗಿದ್ದು, ಸೋಮವಾರ ಬೆಳಗಿನ ಜಾವ 2.30 ಕ್ಕೆ ಇಬ್ರಾಹಿಂ ಮಂಗಳೂರು ಡಾಕ್‌ಗೆ ಕೆಲಸಕ್ಕೆ ಹೋಗಲು ಎದ್ದಾಗ, ತನ್ನ ಮಗಳು ತನ್ನ ಕೋಣೆಯಲ್ಲಿ ಇಲ್ಲದಿರುವುದು ಮತ್ತು ಅಡುಗೆಮನೆಯ ಹಿಂಬಾಗಿಲು ತೆರೆದಿರುವುದು ಕಂಡು ಬಂದಿದೆ. ಸ್ಥಳೀಯ ಸುತ್ತ ಮುತ್ತ ಎಲ್ಲಾ ಕಡೆ ಹುಡುಕಿದ್ದು, ಸಂಬಂಧಿಕರಲ್ಲಿ ವಿಚಾರಿಸಿದರೂ ಸುಳಿವು ಸಿಗಲಿಲ್ಲ.

ಈ ಕುರಿತು ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾಗಿದ್ದ ಯುವತಿಯ ಕುರಿತು ಮಾಹಿತಿ ಇದ್ದಲ್ಲಿ ಮಂಗಳೂರು ನಗರ ನಿಯಂತ್ರಣ ಕೊಠಡಿಯನ್ನು 0824-2220800 ಅಥವಾ ಕೊಣಾಜೆ ಪೊಲೀಸ್‌ ಠಾಣೆಯನ್ನು 0824-2220536 ಅಥವಾ 9480802350 ಗೆ ಸಂಪರ್ಕಿಸಲು ಕೋರಲಾಗಿದೆ.

ರಾಭಿಯತುಲ್‌ ಅಧಭಿಯ ಗೋಧಿ ಮೈ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಳು. 4.6 ಅಡಿ ಎತ್ತರವಿದ್ದು, ಕೊನೆಯ ಬಾರಿಗೆ ನೋಡಿದಾಗ ಗುಲಾಬಿ ಬಣ್ಣದ ಚೂಡಿದಾರ್‌ ಧರಿಸಿದ್ದಳು ಎಂದು ವರದಿಯಾಗಿದೆ.