ಮಂಗಳೂರು; ರಾಷ್ಟ್ರೀಯ ಹೆದ್ದಾರಿ 66 ರ ಬೈಕಂಪಾಡಿಯಲ್ಲಿ ಜೂನ್ 29 ರಂದು ನಡೆದಿದ್ದ ಜ್ಯುವೆಲ್ಲರಿ ಉದ್ಯಮಿಯ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಣಂಬೂರು ಪೊಲೀಸರು ಮತ್ತೆ ನಾಲ್ವರು ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಇದರ ಜೊತೆ ಪ್ರಕರಣಕ್ಕೆ ಒಟ್ಟು 7 ಜನರ ಬಂಧನವಾಗಿದೆ.
ಬಂಧಿತರನ್ನು ಕೇರಳದ ಕಣ್ಣೂರು ಮೂಲದ ಶ್ರೀರಾಗ್ ಹಾಗೂ ಮಿಥುನ್ ಲಾಲ್, ಮಡಿಕೇರಿ ಮೂಲದ ಉಬೇದ್ ಮತ್ತು ಜಿಯಾದ್ ಎಂದು ಗುರುತಿಸಲಾಗಿದೆ. ಇದೇ ಪ್ರಕರಣದಲ್ಲಿ ಕೇರಳದ ನಿಮಿಲ್ ಹಾಗೂ ಕೊಡಗು ಮೂಲದ ಇರ್ಶಾದ್ ಮತ್ತು ಮುಸ್ತಾಫ ಎನ್ನುವವರನ್ನು ಈ ಹಿಂದೆ ಪೊಲೀಸರು ಬಂಧನ ಮಾಡಿದ್ದರು.
ಶ್ರೀರಾಗ್ನ ಮನೆಗೆ ದಾಳಿ ಮಾಡಿದ ಪೊಲೀಸರು ಕೃತ್ಯಕ್ಕೆ ಬಳಸಲಾಗಿದ್ದ ಇನೋವಾ ಮತ್ತು ಸ್ವಿಫ್ಟ್ ಕಾರುಗಳನ್ನು ಜಪ್ತಿ ಮಾಡಿದ್ದಾರೆ. ಇದರ ಜೊತೆ ಹತ್ತು ಗ್ರಾಂ ಚಿನ್ನದ ಉಂಗುರ ಹಾಗೂ ಉದ್ಯಮಿಯ ಮೇಲೆ ಹಲ್ಲೆ ನಡೆಸಲು ಬಳಸಿದ್ದ ಕಬ್ಬಿಣದ ರಾಡ್ನ್ನು ವಶಪಡಿಸಲಾಗಿದೆ.




