ಶನಿವಾರ, 24 ಅಕ್ಟೋಬರ್ 2026

ಯಕ್ಷಗಾನ ಕಲಾವಿದರ ತಾಯಿಗೆ ಅವಾಚ್ಯ ಶಬ್ದಗಳ ನಿಂದನೆ: ಮಹೇಶ್‌ ಶೆಟ್ಟಿ ತಿಮರೋಡಿಗೆ ಷರತ್ತು ಬದ್ಧ ನಿರೀಕ್ಷಣಾ ಜಾಮೀನು

Dharmasthala Soujanya

ಯಕ್ಷಗಾನ ಕಲಾವಿದ ಕೋಡಪದವು ಅವರ ತಾಯಿಯವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪ ಎದುರಿಸುತ್ತಿರುವ ಮಹೇಶ್‌ ಶೆಟ್ಟಿ ತಿಮರೋಡಿ ಅವರಿಗೆ ಹೈಕೋರ್ಟ್‌ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ತಿಮರೋಡಿ ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ಪ್ರತಿವಾರ ಪುತ್ತೂರು ಪೊಲೀಸ್‌ ಠಾಣೆಗೆ ಹಾಜರಾಗಿ ಸಹಿ ಮಾಡಬೇಕು ಎನ್ನುವ ಕಠಿಣ ಷರತ್ತಿನ ಆದೇಶ ಹೊರಡಿಸಿದೆ.

ಅರ್ಜಿದಾರರು ದೂರುದಾರರ ಕುರಿತು ಮಾಡಿರುವ ಆರೋಪಗಳು ಗಂಭೀರವಾಗಿದ್ದು, ಆಕೆಯ ಘನತೆಗೆ ಚ್ಯುತಿ ಉಂಟು ಮಾಡಲಾಗಿದೆ. ಇದು ಕೋಮು ದ್ವೇಷಕ್ಕೂ ಪ್ರಚೋದನೆ ನೀಡಿದೆ. ತಿಮರೋಡಿಯನ್ನು ಕಸ್ಟಡಿಗೆ ಪಡೆದು ತನಿಖೆ ಮಾಡಬೇಕಿದ್ದು, ಅರ್ಜಿ ವಜಾ ಮಾಡಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮುನ್ನ ದೂರುದಾರರನ್ನು ಪ್ರತಿನಿಧಿಸುವುದಾಗಿ ಹಾಜರಾಗಿದ್ದ ವಕೀಲರು, ತಿಮರೋಡಿಗೆ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘನೆ ಮಾಡುವುದು ಹವ್ಯಾಸವಾಗಿದೆ. ನ್ಯಾಯಮೂರ್ತಿಗಳ ವಿರುದ್ಧವೇ ಆರೋಪ ಮಾಡಿದ್ದಾರೆ. ಅದಕ್ಕೆ ಬೇಷರತ್‌ ಕ್ಷಮೆಯನ್ನೂ ಕೋರಿದ್ದಾರೆ ಎಂದು ಪೀಠಕ್ಕೆ ಮನವಿ ಮಾಡಿದರು.

ಇದಕ್ಕೆ ಪೀಠ, ಹರಕಲು ಬಾಯಿ ಅಂತ ಇರುತ್ತೆ ಏನು ಮಾಡಲಾಗುತ್ತದೆ? ನಾಯಿ ಬೊಗಳಿದರೆ ಏನಾಗುತ್ತದೆ? ನಾಯಿ ಬೊಗಳಿದರೆ ಬೊಗಳುತ್ತದೆ ಅಷ್ಟೇ. ಅದು ಪದೇ ಪದೇ ಬೊಗಳಿದರೆ ಹುಚ್ಚು ನಾಯಿ ಎಂದು ಪರಿಗಣಿಸಿ, ಮುಂದೆ ಹೋಗಬೇಕು, ಅಲ್ಲದೇ ತಿಮರೋಡಿ ಏನು ಮಾಡುತ್ತಾರೆ ನಮಗೆ ಬೇಕಿಲ್ಲ. ಮೂರು ವರ್ಷ ಶಿಕ್ಷೆಯಾಗುವ ಅಪರಾಧ ಪ್ರಕರಣ ಇದಾಗಿದೆ. ಅವರಿಗೆ ನಿರೀಕ್ಷಣಾ ಜಾಮೀನು ನೀಡಬಹುದಾಗಿದೆ. ನಿಮ್ಮ ವಾದವನ್ನು ಏಕೆ ಆಲಿಸಬೇಕು? ನಿಮ್ಮ ಅರ್ಜಿಯನ್ನು ಸ್ವೀಕರಿಸಿಲ್ಲ ಎಂದು ತಿರಸ್ಕರಿಸಿತು.