ಭಾನುವಾರ, 25 ಅಕ್ಟೋಬರ್ 2026
Trending

ಶಾಲಾ ಶಿಕ್ಷಕಿಯರಿಂದಲೇ ಡ್ರಗ್ಸ್ ದಂಧೆ!!

ವಿದ್ಯಾರ್ಥಿಗಳಿಗೆ ಮೌಲ್ಯಗಳನ್ನು ಬೋಧಿಸಿ ಸಮಾಜಕ್ಕೆ ಮಾದರಿಯಾಗಬೇಕಿರುವ ಶಿಕ್ಷಕಿಯರೇ ಇದೀಗ ಡ್ರಗ್ಸ್ ದಂಧೆಯ ಅಡ್ಡಾದಲ್ಲಿ ‘ಲೇಡಿ ಡಾನ್‌’ಗಳಾಗಿ ಮೆರೆದು ಪೋಲೀಸರ ಅತಿಥಿಯಾಗಿರುವ ಘಟನೆ ಕೇರಳದ ವಡಕರದಲ್ಲಿ ಬೆಳಕಿಗೆ ಬಂದಿದೆ.

Sponsored

ಪೆರಂಬ್ರ ಬಿಆರ್‌ಸಿಯಲ್ಲಿ ಶಿಕ್ಷಕಿಯರಾಗಿದ್ದ ಕೂರಾಚುಂಡು ಮೂಲದ ಕಾವ್ಯಾ ಮತ್ತು ಮರುತೋಂಕರಾ ಮೂಲದ ಕೀರ್ತನಾ ಎಂಬ ಇಬ್ಬರು ಖತರ್ನಾಕ್ ಮಹಿಳೆಯರು ಬಂಧಿತ ಶಿಕ್ಷಕಿಯರು. ಶಿಕ್ಷಕಿಯರ ವೇಷದಲ್ಲಿದ್ದ ಈ ಲೇಡಿ ಡಾನ್‌ಗಳ ಜಾಲವನ್ನು ಬಯಲಿಗೆಳೆಯಲು ವಡಕರ ಪೊಲೀಸರು ತೀವ್ರ ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಕೀರ್ತನಾ ಎಂಬಾಕೆಯನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಈಕೆಯ ಬಂಧನದ ಬೆನ್ನಲ್ಲೇ ಶಿಕ್ಷಣ ಇಲಾಖೆ ಆಕೆಯನ್ನು ಸೇವೆಯಿಂದ ವಜಾಗೊಳಿಸಿತ್ತು. ಆಕೆಯ ಬಂಧನದ ನಂತರ ವಿಚಾರಣೆ ನಡೆಸಿದ ಪೊಲೀಸರಿಗೆ ಮತ್ತೊಬ್ಬ ಶಿಕ್ಷಕಿ ಕಾವ್ಯಾಳ ಕುರಿತು ಮಹತ್ವದ ಸುಳಿವು ದೊರೆತಿತ್ತು. ಈ ಸುಳಿವು ಆಧರಿಸಿ ‘ಕಾಪುಮುಕ್ಕು ಹೌಸ್’ ನಿವಾಸಿ ಕಾವ್ಯಾಳನ್ನು ಪೊಲೀಸರು ಬಂಧಿಸಿದ್ದಾರೆ. ಕೇವಲ ಎರಡು ವಾರಗಳ ಅಂತರದಲ್ಲಿ ಇಬ್ಬರು ಶಿಕ್ಷಕಿಯರು ಸರಣಿಯಾಗಿ ಬಂಧನಕ್ಕೊಳಗಾಗಿದ್ದು, ಪೊಲೀಸರ ವರದಿಯ ಆಧಾರದ ಮೇಲೆ ಕಾವ್ಯಾಳನ್ನೂ ಸಹ ಸೇವೆಯಿಂದ ವಜಾಗೊಳಿಸಲು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.

ವಡಕರ, ಕುಟ್ಟ್ಯಾಡಿ ಮತ್ತು ನಡಾಪುರಂ ಭಾಗದ ನೂರಾರು ಯುವಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳೇ ಈ ಶಿಕ್ಷಕಿಯರ ಪ್ರಮುಖ ಗ್ರಾಹಕರಾಗಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಡ್ರಗ್ಸ್ ಪೂರೈಸಲು ಇವರು ಕ್ಯೂಆರ್ ಕೋಡ್ (QR Code) ಮೂಲಕ ಹಣ ಪಡೆಯುತ್ತಿದ್ದರು. ಬ್ಯಾಂಕ್ ಖಾತೆಗಳಿಗೆ ಕಂತುಗಳ ರೂಪದಲ್ಲಿ ದೊಡ್ಡ ಮೊತ್ತದ ಹಣ ಜಮೆಯಾಗುತ್ತಿತ್ತು. ಹಣ ತಲುಪಿದ ತಕ್ಷಣ, ಡ್ರಗ್ಸ್ ತಲುಪಿಸಬೇಕಾದ ರಹಸ್ಯ ಜಾಗದ ‘ಲೊಕೇಷನ್’ ಅನ್ನು ಗ್ರಾಹಕರಿಗೆ ಕಳುಹಿಸಿಕೊಡುತ್ತಿದ್ದರು. ಅತ್ಯಂತ ರಹಸ್ಯವಾಗಿ ಮತ್ತು ಮುನ್ನೆಚ್ಚರಿಕೆಯಿಂದ ಈ ದಂಧೆ ಜರುಗುತ್ತಿತ್ತು.  ಶಿಕ್ಷಣ ಕ್ಷೇತ್ರದ ಪವಿತ್ರತೆಗೆ ಕಪ್ಪುಚುಕ್ಕೆ ತಂದಿರುವ ಈ ಘಟನೆಯು ಕೇರಳದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ.