ಶನಿವಾರ, 24 ಅಕ್ಟೋಬರ್ 2026

ಚಿಕ್ಕಬಾಣಾವರ: ಡಬಲ್‌ ಮರ್ಡರ್‌ ಕೇಸ್‌- ಸತ್ಯ ಕಕ್ಕಿದ ಪತ್ನಿ

ಬೆಂಗಳೂರು: ಚಿಕ್ಕಬಾಣಾವರದಲ್ಲಿ ಗಂಡ ಮತ್ತು ಮಗುವಿನ ಜೋಡಿ ಕೊಲೆ ಪ್ರಕರಣಕ್ಕೆ ಕುರಿತಂತೆ ಇದೀಗ ಪೊಲೀಸರು ಪತ್ನಿ ಹರಿಣಿ ವಿಚಾರಣೆ ತೀವ್ರಗೊಳಿಸಿದ್ದು, ಪೊಲೀಸರ ಮುಂದೆ ಸತ್ಯ ಬಾಯ್ಬಿಟ್ಟಿದ್ದಾಳೆ. ಪ್ರಿಯಕರ ವಿನಯ್‌ ಜೊತೆ ಸೇರಿ ಗಂಡ ಹಾಗೂ ಮಗನನ್ನು ತಾನೇ ಕೊಲೆ ಮಾಡಿರುವುದಾಗಿ ವಿಚಾರಣೆ ಸಂದರ್ಭದಲ್ಲಿ ಹರಿಣಿ ಹೇಳಿದ್ದಾಳೆ.

ಘಟನೆ ನಡೆದ ರಾತ್ರಿ 11 ಗಂಟೆ ವೇಳೆಗೆ ಹರಿಣಿ ತನ್ನ ಪ್ರಿಯಕರ ವಿನಯ್‌ನನ್ನು ಮನೆಗೆ ಕರೆಸಿದ್ದು, ಈ ವೇಳೆ ಹರಿಣಿ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್‌ ಮಾಡಿದ್ದಾಳೆ. ನಂತರ ಇಬ್ಬರೂ ಸೇರಿ ಅಭಿನಂದನ್‌ನನ್ನು ಕೊಲೆ ಮಾಡಲು ಮುಂದಾಗಿದ್ದು, ಸೌಟಿನಿಂದ ಅಭಿನಂದನ್‌ ತಲೆಗೆ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಇದನ್ನು ಪುತ್ರ ಯದುವೀರ್‌ ನೋಡಿದ್ದು ತಮಗೆ ತೊಂದರೆಯಾಗಬಹುದು ಎನ್ನುವ ಕಾರಣಕ್ಕೆ ಇಬ್ಬರು ಸೇರಿ ಮಗುವನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ.

ಕೊಲೆ ನಂತರ ಸಾಕ್ಷ್ಯ ನಾಶಮಾಡಲು ಹರಿಣಿ ರಕ್ತದ ಕಲೆಗಳನ್ನು ತೊಳೆದು ಹಾಕಿದ್ದು, ಅಭಿನಂದನ್‌ ಬಟ್ಟೆ ಬದಲಾಯಿಸಿದ್ದಳು. ನಂತರ ಮಗುವನ್ನು ಆತನ ಮೇಲೆ ಮಲಗಿಸಿ ಉಸಿರುಗಟ್ಟಿಸಿ ಸಾಯಿಸಿದ್ದಾನೆ ಎನ್ನುವಂತೆ ಬಿಂಬಿಸಲು ಯತ್ನ ಮಾಡಿರುವುದಾಗಿ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ.

ವಿನಯ್‌ ಪರಾರಿಯಾಗಿದ್ದು, ಪೊಲೀಸರು ಆತನ ಶೋಧ ಕಾರ್ಯ ಮುಂದುವರಿಸಿದ್ದಾರೆ.