ಬೆಂಗಳೂರು: ಸಿಲಿಕಾನ್ ಸಿಟಿಯ ತಾಜ್ ಹೋಟೆಲ್‌ನಲ್ಲಿ ಸೋಮವಾರ ಸಂಜೆ ತಂದೆಯೋರ್ವ ತನ್ನ ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆಗೆ ಯತ್ನ ಮಾಡಿರುವ ಶಂಕೆ ವ್ಯಕ್ತವಾಗಿ. ಆರೋಪಿ ತಂದೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಕ್ಕಳನ್ನು ಶೇಖ್ ಜೆಹ್ರಾ (5) ಮತ್ತು ಶೇಖ್ ಜೋಯಾ (10) ಎಂದು ಗುರುತಿಸಲಾಗಿದೆ. ಮಕ್ಕಳ ತಂದೆ ಎಸ್.ಜಿ. ಇಮ್ರಾನ್ (40) ಎಂಬಾತನೇ ಈ ಕೃತ್ಯ ಎಸಗಿರುವ ಶಂಕೆಯಿದೆ. ಇಮ್ರಾನ್ ಉತ್ತರ ಬೆಂಗಳೂರಿನ ನಾಗವಾರ ಮುಖ್ಯರಸ್ತೆಯ ನಿವಾಸಿಯಾಗಿದ್ದು, ಸೋಮವಾರ ಹೋಟೆಲ್‌ನಲ್ಲಿ ಈ ಘಟನೆ ಸಂಭವಿಸಿದೆ.
ಸೋಮವಾರ ಸಂಜೆ ಹೋಟೆಲ್‌ನ ಕೊಠಡಿಯಿಂದ ಪ್ರತಿಕ್ರಿಯೆ ಬಾರದೇ ಇದ್ದಾಗ ಹೋಟೆಲ್‌ನ ಭದ್ರತಾ ವ್ಯವಸ್ಥಾಪಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದು ಕೊಠಡಿ ತೆರೆದಾಗ ಇಬ್ಬರು ಪುಟ್ಟ ಮಕ್ಕಳು ಶವವಾಗಿ ಬಿದ್ದಿದ್ದು, ಆರೋಪಿ ತಂದೆ ಇಮ್ರಾನ್ ನೆಲದ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದನು. ಕೂಡಲೇ ಆತನನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳದಲ್ಲಿ ಪೊಲೀಸರಿಗೆ ಡೆತ್‌ನೋಟ್ ಪತ್ತೆಯಾಗಿದ್ದು, ಇಮ್ರಾನ್ ಮತ್ತು ಆತನ ಪತ್ನಿ ನಡುವೆ ದಾಂಪತ್ಯ ಕಲಹವಿತ್ತು ಎನ್ನಲಾಗಿದೆ. ಪತ್ನಿ ಮೋಸ ಮಾಡುತ್ತಿರುವುದಾಗಿ ಇಮ್ರಾನ್ ನೋಟ್‌ನಲ್ಲಿ ಬರೆದಿದ್ದಾರೆ. ಇದಕ್ಕೆ ತಕ್ಕುದಾದ ಪುರಾವೆಗಳ ಕುರಿತೂ ಆತ ನೋಟ್‌ನಲ್ಲಿ ಉಲ್ಲೇಖ ಮಾಡಿದ್ದಾನೆ ಎನ್ನಲಾಗಿದೆ.
ಕೌಟುಂಬಿಕ ಕಲಹವೇ ಈ ಭೀಕರ ಕೃತ್ಯಕ್ಕೆ ಕಾರಣವಾಗಿರುವ ಸಾಧ್ಯತೆಯಿದೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.



