ಕಾರ್ಕಳ: ಶಾಸಕ ವಿ ಸುನಿಲ್ ಕುಮಾರ್ ಅವರ ತಲೆ ಕತ್ತರಿಸಿದ ರೀತಿಯಲ್ಲಿ ಚಿತ್ರವನ್ನು ಎಡಿಟ್ ಮಾಡಿ, ಪ್ರಚೋದನಕಾರಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪದಲ್ಲಿ ಪ್ರಸಾದ್ ಶೆಟ್ಟಿ ಎನ್ನುವಾತನ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳದ ವಿಘೇಶ್ ಪ್ರಸಾದ್ ರಾವ್ ಸೆ.12 ರಂದು ರಾತ್ರಿ ಫೇಸ್‌ಬುಕ್ ವೀಕ್ಷಿಸುತ್ತಿದ್ದ ವೇಳೆ ʼPrasad Shetty’ ಎಂಬ ಫೇಸ್‌ಬುಕ್ ಖಾತೆಯಲ್ಲಿ ಶಾಸಕರ ಚಿತ್ರ ಎಡಿಟ್ ಮಾಡಿ, ಅವಾಚ್ಯ ಶಬ್ದಗಳು ಹಾಗೂ ಪ್ರಚೋದನಕಾರಿ ಹಿನ್ನೆಲೆ ಧ್ವನಿ ಜೊತೆ ವಿಡಿಯೋ ಪ್ರಕಟ ಮಾಡಿರುವುದು ಗಮನಕ್ಕೆ ಬಂದಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿರುವ ಕುರಿತು ವರದಿಯಾಗಿದೆ.
ಜನರಿಂದ ಆಯ್ಕೆಯಾದ ಶಾಸಕರನ್ನು ಕೊಲೆ ಮಾಡಬೇಕು, ಹೊಡೆಯಬೇಕು ಎನ್ನುವ ರೀತಿಯಲ್ಲಿ ಸಾರ್ವಜನಿಕರನ್ನು ಪ್ರಚೋದನೆ ಮಾಡುವ ಉದ್ದೇಶದಿಂದ ವಿಡಿಯೋ ಸೃಷ್ಟಿ ಮಾಡಿ ಹರಿಬಿಡಲಾಗಿದೆ. ಇದರಿಂದ ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪ್ರಸಾದ್ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ ಎಂದು ವರದಿಯಾಗಿದೆ.

