ಮೂವರ ಜೀವ ತೆಗೆದ ಅಪಘಾತ ಪ್ರಕರಣ: ಸುಹೇಲ್ ಸೇರಿ ನಾಲ್ವರಿಗೆ ಕೋರ್ಟ್ ಜಾಮೀನು ಮಂಜೂರು

ಮದ್ಯದ ಅಮಲಿನಲ್ಲಿ ಅತಿವೇಗದಿಂದ ಮಿನಿಕೂಪರ್ ಕಾರು ಚಲಾಯಿಸಿ ಮೂವರ ಸಾವಿಗೆ ಕಾರಣರಾದ ಪ್ರಕರಣದಲ್ಲಿ ಪ್ರಮುಖ ಆರೋಪಿ ಸುಹೇಲ್ ಸೇರಿ ನಾಲ್ವರಿಗೆ ಕೇರಳ ಹೈಕೋರ್ಟ್ ಜಾಮೀನು ನೀಡಿದೆ. ಆರೋಪಿಗಳನ್ನು ಎರಡು ಬಾರಿ ವಿಚಾರಣೆ ನಡೆಸಲಾಗಿದ್ದು, ಸುಮಾರು 20 ದಿನಗಳ ಕಾಲ ಜೈಲಿನಲ್ಲಿದ್ದರು. ಹೀಗಾಗಿ ಮತ್ತಷ್ಟು ದಿನ ನ್ಯಾಯಾಂಗ ಬಂಧನದಲ್ಲಿ ಇಡುವ ಅಗತ್ಯವಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯ ಪಟ್ಟಿದೆ.
Sponsoredಅ.11 ರಂದು ಸುಹೇಲ್ ತನ್ನ ಮಿನಿ ಕೂಪರ್ ಕಾರಿನಲ್ಲಿ ಕೊಚ್ಚಿನ್ ವಿಮಾನ ನಿಲ್ದಾಣದ ಕಡೆಗೆ ತೆರಳುತ್ತಿದ್ದ. ಕಾರಿನಲ್ಲಿ ಆತನ ಸ್ನೇಹಿತರಾದ ಅಮೀನ್ ಶಾ, ನಿನಾವ್ ಮತ್ತು ಜೋಯಲ್ ಎಸ್ ಆಂಟೋ ಇದ್ದರು. ನಾಲ್ವರೂ ಮದ್ಯಪಾನ ಮಾಡಿದ್ದರು. ಈ ವೇಳೆ ಅತಿವೇಗದಿಂದ ಬಂದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನದಲ್ಲಿದ್ದ ಮೂವರು ಮೃತಪಟ್ಟಿದ್ದರು.
ಇಯಾನ್ಸ್, ಗೋತಿಕಾ, ದೇವಿಕಾ ಮೃತಪಟ್ಟವರು. ತ್ರಕ್ಕಕ್ಕರದ ಕ್ರಾಫ್ಟ್ ರಿಟೇಲ್ ಸ್ಟೋರ್‌ನಲ್ಲಿ ಮೂವರು ಕೆಲಸ ಮಾಡುತ್ತಿದ್ದರು. ಅಪಘಾತದ ಬಳಿಕ ಕಾರಿನಲ್ಲಿದ್ದವರು ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನ ಮಾಡಿದ್ದು, ಆದರೆ ಸ್ಥಳೀಯರು ಸುತ್ತುವರಿದು ಸುಹೇಲ್ ಮತ್ತು ನಿನಾವ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಉಳಿದ ಇಬ್ಬರಾದ ಅಮೀನ್ ಮತ್ತು ಜೋಯಲ್‌ನನ್ನು ಪೊಲೀಸರು ಮರುದಿನ ಆಲಪ್ಪುಳದಿಂದ ಬಂಧನ ಮಾಡಿದ್ದರು.
ಕಾರು ಚಲಾಯಿಸುತ್ತಿದ್ದ ಸುಹೇಲ್ ವಿರುದ್ಧ ಗಂಭೀರ ಆರೋಪಗಳಡಿ ಪ್ರಕರಣ ದಾಖಲು ಮಾಡಲಾಗಿತ್ತು. ಉಳಿದ ಮೂವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿತ್ತು.
ಆರೋಪಿಗಳು ಜಾಮೀನು ಪಡೆಯಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಅಂಗಮಾಲಿ ಟ್ರಯಲ್ ಕೋರ್ಟ್, ಎರ್ನಾಕುಲಂ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಇವರ ಜಾಮೀನು ತಿರಸ್ಕೃತಗೊಂಡಿತ್ತು. ಕೊನೆಗೆ ಕೇರಳ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ನಾಲ್ವರು ಆರೋಪಿಗಳಿಗೂ ಜಾಮೀನು ಮಂಜೂರು ಮಾಡಿದೆ.
ನ್ಯಾಯಾಲಯ ನಾಲ್ವರು ಆರೋಪಿಗಳಿಗೂ ಜಾಮೀನು ನೀಡಿದೆಯಾದರೂ ಪ್ರಮುಖ ಆರೋಪಿ ಸುಹೇಲ್ ಸಜೀವ್‌ಗೆ ಕೂಡಲೇ ಬಿಡುಗಡೆ ಮಾಡಲು ಅನುಮತಿ ನೀಡಿಲ್ಲ. 10 ದಿನಗಳ ಬಳಿಕ ಬಿಡುಗಡೆ ಮಾಡುವಂತೆ ಆದೇಶಿಸಿದೆ. ಉಳಿದ ಮೂವರು ಆರೋಪಿಗಳನ್ನು ಅದಕ್ಕೂ ಮುನ್ನ ಬಿಡುಗಡೆ ಮಾಡಬಹುದು ಎಂದು ತಿಳಿಸಿದೆ.




