ಕೊಟ್ಟಿಗೆಹಾರ: ವಿಲ್ಪುರಂ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ (ಇಂದು) ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಗ್ರಾಮದ ಮೂವರು ಯುವಕರು ಸ್ಥಳದಲ್ಲಿಯೇ ದುರಂತ ಅಂತ್ಯ ಕಂಡಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹಳಿಲ್ ಗದ್ದೆ ಗ್ರಾಮದ ನಿವಾಸಿಗಳಾದ ಜ್ಞಾನೇಶ, ಮೋಹನ ಹಾಗೂ ಗುರುಕಿರಣ್ ಮೃತಪಟ್ಟ ಯುವಕರು.
ಕಾರಿನಲ್ಲಿದ್ದ ಪ್ರೇಮ್ ಮತ್ತು ಹೃತಿಕ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆಂದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತುಮಕೂರಿನಿಂದ ಧರ್ಮಸ್ಥಳ ಕ್ಷೇತ್ರ ದರ್ಶನಕ್ಕೆಂದು ಕಾರಿನಲ್ಲಿ ಪ್ರಯಾಣಿ ಮಾಡುತ್ತಿದ್ದ ಇವರುಗಳು, ಕೊಟ್ಟಿಗೆಹಾರದ ಪೆಟ್ರೋಲ್ ಬಂಕ್ ಮುಂಭಾಗ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಗೆ ಹಿಂಬದಿಯಿಂದ ಕಾರು ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮೂವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.
ಅಪಘಾತದ ಶಬ್ದ ಕೇಳಿ ಸ್ಥಳೀಯರು ಕೂಡಲೇ ಬಂದು ಕಾರಿನಲ್ಲಿದ್ದವರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲು ಮಾಡಲು ನೆರವಾಗಿದ್ದರು. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ

